ಬೆಂಗಳೂರು: ಬೆಂಗಳೂರು ಹಾಗೂ ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗ ಶಿರಾಡಿಘಾಟ್ ರಸ್ತೆಯಲ್ಲಿ ಭೂಕುಸಿತವುಂಟಾಗಿದ್ದು, ವಾಹನ ಸಂಚಾರ ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಮಂಗಳೂರು ತಲುಪಲು ಪರ್ಯಾಯ ಮಾರ್ಗದ ಬಗ್ಗೆ ಮಾಹಿತಿ ಇಲ್ಲಿದೆ.
ಹಾಸನದಿಂದ ಸಕಲೇಶಪುರ ಮಾರ್ಗದಲ್ಲಿ ದೋಣಿಗಲ್ ಬಳಿ ಮಂಗಳೂರಿಗೆ ಹೋಗುವ ಮಾರ್ಗದಲ್ಲಿ ಭೂಕುಸಿತವುಂಟಾಗಿದ್ದು, ವಾಹನ ಸಂಚಾರ ಸಂಪೂರ್ಣ ನಿರ್ಬಂಧಿಸಲಾಗಿದೆ. ಪರ್ಯಾಯ ಮಾರ್ಗದ ಬಗ್ಗೆ ಹಾಸನ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಲಘು ವಾಹನಗಳು ಹಾಸನದಿಂದ ಅರಕಲಗೂಡು, ಕುಶಾಲನಗರ, ಮಡಿಕೇರಿ ಹಾಗೂ ಸಂಪಾಜೆ ಮೂಲಕ ಮಂಗಳೂರಿಗೆ ತಲುಪಬಹುದು.
ಬಸ್ ಹಾಗೂ ಮಧ್ಯಮ ಪ್ರಮಾಣದ ಸರಕು ಸಾಗಣೆ ವಾಹನಗಳು ಹಾಸನದಿಂದ ಬೇಲೂರು ಮೂಡಿಗೆರೆ ಮೂಲಕ ಚಾರ್ಮಡಿಘಾಟ್ ತಲುಪಿ ಅಲ್ಲಿಂದ ಮಂಗಳೂರು ತಲುಪಬಹುದು
ಭಾರಿ ವಾಹನಗಳಾದ ಟ್ರಕ್, ಹತ್ತು ಚಕ್ರದ ಸರಕು ಸಾಗಣೆ ಭಾರಿ ವಾಹನಗಳು ಈ ಮಾರ್ಗಗಳ ಬದಲಾಗಿ ಬೇರೆ ಪರ್ಯಾಯ ಮಾರ್ಗವನ್ನು ಅನುಸರಿಸುವುದು ಉತ್ತಮ ಎಂದು ತಿಳಿಸಿದ್ದಾರೆ.
ಮುಂದಿನ ಆದೇಶದವರೆಗೆ ಶಿರಾಡಿಘಾಟ್ ನಲ್ಲಿ ವಾಹನ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ.