ಬೆಂಗಳೂರು: ದೇಶದ ವಿವಿಧ ರಾಜ್ಯಗಳಲ್ಲಿ ವರುಣಾರ್ಭಟ ಜೋರಾಗಿದ್ದು, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಗುಜರಾತ್, ಕೇರಳದಲ್ಲಿ ಭಾರಿ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ.
ಕರ್ನಾಟಕದ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ವರ್ಷಧಾರೆಗೆ ಭೂಕುಸಿತ, ಗುಡ್ಡಕುಸಿತದಂತಗಳಿಂದಾಗಿ ರಸ್ತೆ ಸಂಪರ್ಕ ಕಡಿತಗೊಂಡಿದ್ದರೆ ಉತ್ತರ ಕರ್ನಾಟಕ ಭಾಗದಲ್ಲಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಜಲಾಶಯಗಳಿಂದ ಅಪಾರ ಪ್ರಮಾಣದಲ್ಲಿ ನೀರು ಹೊರಬಿಡಲಾಗುತ್ತಿದೆ. ಮಳೆಯ ಅಬ್ಬರದ ನಡುವೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಭೀತಿಯುಂಟಾಗಿದೆ.
ಬೆಳಗಾವಿ, ಕೊಪ್ಪಳ, ವಿಜಯಪುರ, ಬೀದರ್, ಕಲಬುರ್ಗಿ, ಜಿಲ್ಲೆಗಳಲ್ಲಿ ಮಳೆ ಅಬ್ಬರದ ನಡುವೆ ಪ್ರವಾಹ ಭೀತಿ ಎದುರಾಗಿದೆ, ಮಹಾಮಳೆಗೆ ವೇದಗಂಗಾ, ದೂದಗಂಗಾ ನದಿ ತುಂಬಿ ಹರಿಯುತ್ತಿದೆ. ಮಹಾರಾಷ್ಟ್ರದಿಂದ ಕೃಷ್ಣಾನದಿಗೆ ಭಾರಿ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದ್ದು, ಮತ್ತೊಂದೆಡೆ ಘಟಪ್ರಭಾ, ಮಲಪ್ರಭಾ ನದಿಗಳು ತುಂಬಿ ಹರಿಯುತ್ತಿವೆ. ಬೆಳಗಾವಿ ಜಿಲ್ಲೆಯ ಬಹುತೇಕ ತಾಲೂಕುಗಳು ಜಲಾವೃತಗೊಂಡಿವೆ.
ಮಹಾರಾಷ್ಟ್ರದಲ್ಲಿ ಮಹಾಮಳೆ ಮುಂದುವರೆದಿದ್ದು, ಕಳೆದ 24ಗಂಟೆಯಲ್ಲಿ ರಾಜ್ಯದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಕಳೆದ 15ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಮಳೆ ಅವಾಂತರದಿಂದಾಗಿ ಮಹಾರಾಷ್ಟ್ರದಲ್ಲಿ ಈವರೆಗೆ 99 ಜನರು ಸಾವನ್ನಪ್ಪಿದ್ದಾರೆ. 7,963 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ. 14 ಎನ್ ಡಿ ಆರ್ ಎಫ್, 6 ಎಸ್ ಡಿ ಆರ್ ಎಫ್ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.
ಗುಜರಾತ್ ನಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹವುಂಟಾಗಿದ್ದು, 8 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಸೂರತ್, ಜುನಾಗಢ, ಗಿರ್, ಭಾವ್ ನಗರ, ತಪಿ, ಡಾಂಗ್, ವಲ್ಸದ್, ನವಸಾರಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.