ಮಾನಸಿಕ ಅಸ್ವಸ್ಥನೊಬ್ಬ ರಸ್ತೆ ಬದಿ ನಿಲ್ಲಿಸಿದ್ದ ಖಾಸಗಿ ಬಸ್ ಅನ್ನು ತನ್ನ ಊರಿಗೆ ಹೋಗುವ ಸಲುವಾಗಿ ಚಲಾಯಿಸಿಕೊಂಡು ಹೋಗಿದ್ದು, ಬಸ್ ಮಾಲೀಕನ ಸಮಯಪ್ರಜ್ಞೆಯಿಂದಾಗಿ ದೊಡ್ಡ ದುರಂತವೊಂದು ತಪ್ಪಿದೆ. ಇಂಥದೊಂದು ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಮಲ್ಲಾಪುರದಲ್ಲಿ ನಡೆದಿದೆ.
ರಫೀಕ್ ಎಂಬವರ ಬಸ್ ಗುರುವಾರದಂದು ಅವರ ಮನೆ ಮುಂದೆ ನಿಂತಿತ್ತು. ಈ ವೇಳೆ ನ್ಯಾಮತಿ ಮೂಲದ ಮಾನಸಿಕ ಅಸ್ವಸ್ಥ ಕರಿಬಸವ ಎಂಬಾತ ಬಸ್ಸನ್ನು ಏರಿ ಚಲಾಯಿಸಿಕೊಂಡು ಹೋಗಿದ್ದಾನೆ. ಈ ಸಂದರ್ಭದಲ್ಲಿ ರಸ್ತೆ ಪಕ್ಕದಲ್ಲಿದ್ದ ಬಸ್ ಮಾಲೀಕ ರಫೀಕ್ ಇದನ್ನು ಗಮನಿಸಿದ್ದು ನಿಲ್ಲಿಸುವಂತೆ ಕೈ ಮಾಡಿದ್ದಾರೆ.
ಆದರೆ ಆತ ಜೋರಾಗಿ ಚಲಾಯಿಸಿಕೊಂಡು ಹೋದ ಕಾರಣ ಮತ್ತೊಂದು ವಾಹನದಲ್ಲಿ ಬೆನ್ನಟ್ಟಿಕೊಂಡು ಹೋಗಿ ಮಂಗೋಟೆ ತಿರುವಿನ ಹಳ್ಳದ ಸೇತುವೆ ಬಳಿ ಬಸ್ ನಿಲ್ಲಿಸಿದ್ದಾರೆ. ಆತನನ್ನು ಕೆಳಗಿಳಿಸಿ ವಿಚಾರಿಸಿದಾಗ ನಾನು ಊರಿಗೆ ಹೋಗಬೇಕಿತ್ತು ಹಾಗಾಗಿ ಬಸ್ ತಂದೆ ಎಂದು ಹೇಳಿದ್ದಾನೆ.
ಇದೀಗ ಆತನನ್ನು ಹೊಳೆಹೊನ್ನೂರು ಪೊಲೀಸರಿಗೆ ಒಪ್ಪಿಸಲಾಗಿದ್ದು, ಒಂದೊಮ್ಮೆ ಈತ ಆನವೇರಿಯವರೆಗೆ ಬಸ್ ಚಲಾಯಿಸಿಕೊಂಡು ಹೋಗಿದ್ದರೆ ದೊಡ್ಡ ಅನಾಹುತವೇ ನಡೆಯುತ್ತಿತ್ತು ಎಂದು ಹೇಳಲಾಗಿದೆ.
ಆನವೇರಿಯಲ್ಲಿ ಪ್ರತಿ ಗುರುವಾರ ರಸ್ತೆ ಬದಿಯಲ್ಲಿಯೇ ಸಂತೆ ನಡೆಯುತ್ತಿದ್ದು, ದ್ವಿಚಕ್ರ ವಾಹನ ಓಡಾಡಲು ಸಹ ಕಷ್ಟವಾಗುತ್ತದೆ. ಅಂತಹದರಲ್ಲಿ ಈತ ಬಸ್ ಚಲಾಯಿಸಿಕೊಂಡು ಹೋಗಿದ್ದರೆ ಭಾರಿ ದುರಂತ ನಡೆಯುವ ಸಾಧ್ಯತೆ ಇತ್ತು.