ಭದ್ರತಾ ಸಿಬ್ಬಂದಿಯೋರ್ವ ಪ್ರಾಣವನ್ನು ಒತ್ತೆ ಇಟ್ಟು ದರೋಡೆಗೆ ಯತ್ನಿಸಿದ ಮೂವರು ದರೋಡೆಕೋರರನ್ನು ಏಕಾಂಗಿಯಾಗಿ ಹಿಮ್ಮೆಟ್ಟಿಸಿದ ಘಟನೆ ಪಂಜಾಬಿನ ಮೊಗಾ ಜಿಲ್ಲೆಯಲ್ಲಿ ನಡೆದಿದೆ.
ಈ ಧೈರ್ಯಶಾಲಿಯ ಹೆಸರು ಮಂದಾರ್ ಸಿಂಗ್.
ರಾತ್ರಿ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಮೂವರು ದರೋಡೆಕೋರರು ಮನೆಗೆ ನುಗ್ಗಿ ದರೋಡೆ ಮಾಡಲು ಯತ್ನಿಸಿದ್ದರು. ಇವರನ್ನು ಕಂಡ ಮಂದಾರ್ ಸಿಂಗ್ ಧೈರ್ಯದಿಂದ ಅವರನ್ನು ತಡೆದಿದ್ದಾನೆ. ಆದರೆ, ದರೋಡೆಕೋರರು ಆತನನ್ನು ಹಿಗ್ಗಾಮುಗ್ಗ ಥಳಿಸಿದ್ದಾರೆ ಮತ್ತು ಓರ್ವ ಹರಿತವಾದ ಕತ್ತಿಯಿಂದ ತಿವಿದಿದ್ದಾರೆ.
ಈ ಭಯಾನಕ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಮೂವರು ದರೋಡೆಕೋರರು ಎಷ್ಟೇ ಹಲ್ಲೆ ಮಾಡಿದರೂ ಅವರನ್ನು ಕಾರು ಪಾರ್ಕಿಂಗ್ ನಿಂದ ಮನೆಯೊಳಗೆ ಹೋಗಲು ಬಿಡದ ಮಂದಾರ ಸಿಂಗ್ ಅವರೊಂದಿಗೆ ಸೆಣಸಾಡಿದ್ದಾರೆ.
ಅಲ್ಲದೇ, ಒಬ್ಬನ ಬಟ್ಟೆಯನ್ನು ಹಿಡಿದು ಎಳೆಯುತ್ತಾ ಅವನನ್ನು ಹಿಡಿದುಕೊಳ್ಳುವ ಪ್ರಯತ್ನವನ್ನೂ ಮಾಡಿದ್ದಾರೆ. ಹಲವು ಬಾರಿ ಹಲ್ಲೆ ಮಾಡಿದರೂ ತನ್ನ ಪ್ರಾಣವನ್ನು ಒತ್ತೆ ಇಟ್ಟು ಅವರನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ ಈ ಭದ್ರತಾ ಸಿಬ್ಬಂದಿ.
ಇದನ್ನೇ ಅಲ್ಲವೇ ಸ್ವಾಮಿನಿಷ್ಠೆ ಎನ್ನುವುದು. ತಾನು ನೇಮಕವಾಗಿರುವ ಮನೆ ಮತ್ತು ಮನೆಯ ಸದಸ್ಯರನ್ನು ರಕ್ಷಿಸುವ ಮೂಲಕ ಮಂದಾರ್ ಸಿಂಗ್ ಸ್ವಾಮಿನಿಷ್ಠೆಯನ್ನು ಕಾಯ್ದುಕೊಂಡು ಎಲ್ಲರಿಂದಲೂ ಭೇಷ್ ಎನಿಸಿಕೊಂಡಿದ್ದಾರೆ.
ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಂದಾರ್ ಸಿಂಗ್, ಮುಖಕ್ಕೆ ಮಾಸ್ಕ್ ಧರಿಸಿದ್ದ ಮೂವರು ದರೋಡೆಕೋರರು ಬೈಕ್ ನಲ್ಲಿ ಬಂದಿದ್ದರು. ಮಾಸ್ಕ್ ತೆಗೆಯುವಂತೆ ಅವರಿಗೆ ಸೂಚಿಸಿದರೂ ಒಪ್ಪಲಿಲ್ಲ. ಅವರು ನನಗೆ ಕತ್ತಿಯಿಂದ ತಿವಿದರು ಮತ್ತು ಹಲ್ಲೆ ನಡೆಸಿದರು. ಆದರೂ ನಾನು ಅವರೊಂದಿಗೆ ಧೈರ್ಯದಿಂದ ಹೋರಾಟ ನಡೆಸಿ ಅವರನ್ನು ಹಿಮ್ಮೆಟಿಸಿದೆ ಎಂದು ಹೇಳಿದ್ದಾರೆ.
https://www.youtube.com/watch?v=f_nP8cudhCg&feature=share