ಬೆಂಗಳೂರು: ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಡೆದಿದೆ.
ಮೈಸೂರಿನ ಹೊಸಕೇರಿ ನಿವಾಸಿ ನಿಖಿಲ್ (23) ಮೃತ ಯುವಕ. ಕಳೆದ ಮೂರು ದಿನಗಳ ಹಿಂದೆ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ನಿಖಿಲ್ ಭಾಗವಹಿಸಿದ್ದ. ಕಿಕ್ ಬಾಕ್ಸಿಂಗ್ ವೇಳೆ ಬಾಕ್ಸಿಂಗ್ ರಿಂಗ್ ನಲ್ಲಿ ಯುವಕನ ಎದೆ ಭಾಗಕ್ಕೆ ಪೆಟ್ಟು ಬಿದ್ದಿತ್ತು. ಗಾಯಾಳು ನಿಖಿಲ್ ನನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನಿಖಿಲ್ ಶ್ವಾಸಕೋಶ ಭಾಗಕ್ಕೆ ಗಂಭೀರವಾಗಿ ಪೆಟ್ಟು ಬಿದ್ದಿತ್ತು ಎಂದು ತಿಳಿದುಬಂದಿದೆ. ಚಿಕಿತ್ಸೆ ಫಲಕಾರಿಯಾಗದೆ ಇಂದು ಯುವಕ ಕೊನೆಯುಸಿರೆಳೆದಿದ್ದಾನೆ. ನಿಖಿಲ್ ಕುಟುಂಬದವರು ಕಿಕ್ ಬಾಕ್ಸಿಂಗ್ ಸ್ಪರ್ಧೆ ಆಯೋಜಕರ ವಿರುದ್ಧ ಜ್ಞಾನ ಭಾರತಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.