ಜೂನ್ 3 ರಂದು ಕಾನ್ಪುರದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಸ್ಪೋಟಕ ಮಾಹಿತಿ ಹೊರಬಿದ್ದಿದೆ. ಈ ಘಟನೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಕೇಸ್ ಡೈರಿಯನ್ನು ಸಲ್ಲಿಸಿದ್ದು, ಹಲವು ಪ್ರಮುಖ ಸಂಗತಿ ಅದರಲ್ಲಿ ಅಡಗಿದೆ.
ಪ್ರವಾದಿ ಮಹಮ್ಮದ್ ಪೈಗಂಬರ್ ಕುರಿತು ಅಮಾನತುಗೊಂಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ ಹೇಳಿಕೆಯನ್ನು ವಿರೋಧಿಸಿ ಸಂಘಟನೆಯೊಂದು ಬಂದ್‌ಗೆ ಕರೆ ನೀಡಿದ ನಂತರ ಕಾನ್ಪುರದಲ್ಲಿ ಕಳೆದ ತಿಂಗಳು ಹಿಂಸಾತ್ಮಕ ಘರ್ಷಣೆಗಳು, ಕಲ್ಲು ತೂರಾಟ ನಡೆದಿತ್ತು.
ಪಬ್ಲಿಕ್ ಪ್ರಾಸಿಕ್ಯೂಟರ್ ದಿನೇಶ್ ಅಗರ್ವಾಲ್ ಅವರು ಪ್ರಕರಣದ ಡೈರಿಯನ್ನು ಕೋರ್ಟ್‌ಗೆ ಸಲ್ಲಿಸಿದ್ದಾರೆ.
ಎಸ್‌ಐಟಿ ತನಿಖೆ ಪ್ರಕಾರ, ದುಷ್ಕರ್ಮಿಗಳಿಗೆ ಹಿಂಸಾಚಾರ ಎಸಗಲು ಹಣ ನೀಡಲಾಗಿತ್ತು. ಕಲ್ಲು ತೂರಾಟಗಾರರಿಗೆ 500- 1,000 ರೂಪಾಯಿ ನೀಡಲಾಗಿತ್ತು ಮತ್ತು ಗಲಭೆಯಲ್ಲಿ ಪೆಟ್ರೋಲ್ ಬಾಂಬ್ ಬಳಸಿದವರಿಗೆ 5,000 ರೂಪಾಯಿಗಳನ್ನು ನೀಡಲಾಗಿದೆ. ಈ ಅಂಶವನ್ನು ಕೇಸ್ ಡೈರಿಯಲ್ಲಿ ಉಲ್ಲೇಖಿಸಲಾಗಿದೆ.
ಪೊಲೀಸರ ಬಳಿ ಸಿಕ್ಕಿಬಿದ್ದರೆ ಉಚಿತ ಕಾನೂನು ನೆರವು ನೀಡುವ ಭರವಸೆಯನ್ನು ದುಷ್ಕರ್ಮಿಗಳಿಗೆ ನೀಡಲಾಗಿತ್ತು ಎಂದು ಎಸ್‌ಐಟಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ದುಷ್ಕರ್ಮಿಗಳಿಗೆ ಗಲಾಟೆಗಾಗಿಯೇ ಏಳರಿಂದ ಒಂಬತ್ತು ದಿನಗಳ ತರಬೇತಿಯನ್ನು ನೀಡಲಾಗಿತ್ತು ಎಂದು ಕೇಸ್ ಡೈರಿಯಲ್ಲಿದೆ.
ಜೂನ್ 3 ರಂದು ನಡೆದ ಕಾನ್ಪುರ ಹಿಂಸಾಚಾರದಲ್ಲಿ ಇದುವರೆಗೆ 60 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.