ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ರಾಜಸ್ಥಾನ ಭೇಟಿ ನೀಡಿದ್ದ ಸಂದರ್ಭದಲ್ಲಿ ಬಿಜೆಪಿಯ ಆಂತರಿಕ ಕಲಹ ಹೊರಬಿದ್ದಿದೆ. ದಲಿತ ಬೆಂಬಲಿಗರನ್ನು ಕರೆತರುವ ವಿಚಾರವಾಗಿ ರಾಜ್ಯಸಭಾ ಸದಸ್ಯ ಡಾ. ಕಿರೋರಿ ಲಾಲ್ ಮೀನಾ ಮತ್ತು ವಿಧಾನಸಭೆಯ ಉಪನಾಯಕ ರಾಜೇಂದ್ರ ಸಿಂಗ್ ರಾಥೋಡ್ ನಡುವೆ ವಾಗ್ವಾದ ನಡೆದಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಡಾ.ಕಿರೋರಿ ಲಾಲ್ ಮೀನಾ ಬಿಜೆಪಿ ಪರ ಘೋಷಣೆಗಳೊಂದಿಗೆ ತಮ್ಮ ಬೆಂಬಲಿಗರೊಂದಿಗೆ ಸಭಾಂಗಣಕ್ಕೆ ಪ್ರವೇಶಿಸುತ್ತಿದ್ದಂತೆ, ಮುರ್ಮು ಚುನಾವಣಾ ಪ್ರಚಾರದ ಉಸ್ತುವಾರಿಯೂ ಆಗಿರುವ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಬಿಜೆಪಿ ಪರ ಘೋಷಣೆ ಹಾಕುವುದನ್ನು ನಿಲ್ಲಿಸುವಂತೆ ಕೇಳಿಕೊಂಡರಲ್ಲದೇ ಬೆಂಬಲಿಗರನ್ನು ಕೊಠಡಿಯಿಂದ ಹೊರಹೋಗುವಂತೆ ಹೇಳಿದರು.
ಇದರಿಂದ ಕೆರಳಿದ ಮೀನಾ, ರಾಥೋಡ್ ಮಾಡಿದ ಪ್ರವೇಶ ಪಾಸ್ ವ್ಯವಸ್ಥೆಯನ್ನು ತೀವ್ರವಾಗಿ ಆಕ್ಷೇಪಿಸಿದರು. ತಮ್ಮ ಪರವಾದ ದಲಿತ ಬೆಂಬಲಿಗರಿಗೆ ಏಕೆ ಪ್ರವೇಶ ನಿರಾಕರಿಸಲಾಗುತ್ತಿದೆ ಎಂದು ಪ್ರಶ್ನಿಸಿದರು. ಈ ವೇಳೆ ಸ್ಪಷ್ಟನೆ ನೀಡಿದ ರಾಥೋಡ್, ಮುರ್ಮು ಭೇಟಿ ಹಿನ್ನೆಲೆ ಶಾಸಕರು ಮತ್ತು ಸಂಸದರ ಸಭೆ ಇದಾಗಿದೆ ಎಂದರು.
ಆದರೆ ಮೀನಾ ಕೋಪಗೊಂಡು ರಾಥೋಡ್ಗೆ ಸವಾಲು ಹಾಕಿದರು. ಆದರೆ ಗಜೇಂದ್ರ ಸಿಂಗ್ ತಕ್ಷಣ ಮೀನಾರನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ. ರಾಥೋಡ್ ಅವರು ಭಾಷೆಯನ್ನು ಗಮನದಲ್ಲಿಟ್ಟುಕೊಳ್ಳಲು ಮೀನಾಗೆ ಸಲಹೆ ನೀಡಿದರು. ಈ ಮಾತಿನ ವಿನಿಮಯದ ನಂತರ, ಮೀನಾ ಹೋಟೆಲ್ನಿಂದ ಹೊರಬಂದು ಅಲ್ಲಿ ಕಾಣಿಸಿಕೊಳ್ಳದೇ ಹೊರಟುಹೋಗಿದ್ದಾಋೆ.
ಎನ್ಡಿಎ ಅಭ್ಯರ್ಥಿಯನ್ನು ಅಭಿನಂದಿಸಲು ಡುಂಗಾಪುರ- ಬನ್ಸ್ವಾರಾದಿಂದ ಜೈಪುರಕ್ಕೆ ಬಂದ ಬುಡಕಟ್ಟು ಕಾರ್ಮಿಕರು ತಮ್ಮ ಪ್ರವೇಶವನ್ನು ನಿರಾಕರಿಸಿದ್ದಕ್ಕೆ ನನ್ನಂತಹ ಭಾವನಾತ್ಮಕ ವ್ಯಕ್ತಿಗೆ ಸಿಟ್ಟು ಬಂತು. ನನ್ನ ಮತ್ತು ರಾಥೋಡ್ ನಡುವೆ ಯಾವುದೇ ವ್ಯತ್ಯಾಸ ಇಲ್ಲ ಎಂದು ಮೀನಾ ಪ್ರತಿಕ್ರಿಯೆ ನೀಡಿದ್ದಾರೆ.
ಆದರೆ ಈ ಘಟನೆಯ ವಿಡಿಯೋ ಕ್ಲಿಪ್ ಅನ್ನು ವಾಟ್ಸಾಪ್ನಲ್ಲಿ ಮತ್ತು ತಮ್ಮ ಟ್ವೀಟ್ನಲ್ಲಿ ಪೋಸ್ಟ್ ಮಾಡಿರುವ ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೋಟಸಾರಾ ಬಿಜೆಪಿಯನ್ನು ಲೇವಡಿ ಮಾಡಿದ್ದಾರೆ.