ಇಂದಿನ ದಿನಮಾನದ ಮಹಿಳೆಯರು ದುಡಿಮೆಯಲ್ಲಿ ತೊಡಗುವುದು ಸಾಮಾನ್ಯ. ಹೀಗಿರುವಾಗ ಮಗುವೋ ? ವೃತ್ತಿಯೋ ? ಎಂಬ ಆಯ್ಕೆ ಮಾಡಿಕೊಳ್ಳುವ ಸಂದರ್ಭ ಎದುರಾಗುವುದು ಸಾಮಾನ್ಯ.
ಈ ವಿಷಯವಾಗಿ ಕೋರ್ಟ್ ಮಹತ್ವದ ಆದೇಶವೊಂದನ್ನು ನೀಡಿದೆ. ತನ್ನ ಮಗು ಮತ್ತು ತನ್ನ ವೃತ್ತಿಜೀವನದ ನಡುವೆ ಆಯ್ಕೆ ಮಾಡುವಂತೆ ಮಹಿಳೆಯನ್ನು ಕೇಳಲಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಮಹಿಳೆಗೆ ಉದ್ಯೋಗ ನೀಡಿದ ಕಂಪನಿಯು ಪೋಲೆಂಡ್‌ಗೆ ವರ್ಗಾವಣೆ ಮಾಡಿದ್ದು, ಆಕೆಗೆ ತನ್ನ ಅಪ್ರಾಪ್ತ ಮಗಳೊಂದಿಗೆ ಪೋಲೆಂಡ್‌ಗೆ ಸ್ಥಳಾಂತರಗೊಳ್ಳಲು ಅನುಮತಿ ನೀಡಿದೆ.
ಉದ್ಯೋಗದ ವಿಷಯದಲ್ಲಿ ಒಲವು ತೋರುವ ತಾಯಿಗೆ ಉದ್ಯೋಗದ ನಿರೀಕ್ಷೆ ನಿರಾಕರಿಸಬಹುದು ಎಂದು ಕೋರ್ಟ್ ಭಾವಿಸುವುದಿಲ್ಲ ಮತ್ತು ಅವರು ಈ ಅವಕಾಶದಿಂದ ವಂಚಿತರಾಗಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಭಾರ್ತಿ ಹೇಳಿದರು. ಈ ಪ್ರಕರಣದಲ್ಲಿ ಅವರು ಮೂವತ್ತೊಂದು ಪುಟಗಳ ಆದೇಶ ನೀಡಿದ್ದಾರೆ.
ಜುಲೈ 8ರಂದು ಆದೇಶ ಹೊರಡಿಸಲಾಗಿತ್ತು, ಬುಧವಾರದಂದು ವಿವರವಾದ ಪ್ರತಿ ಲಭ್ಯವಾಗಿದೆ.
ತನ್ನ ಅಪ್ರಾಪ್ತ ಮಗಳು ಮತ್ತು ತಾಯಿಯೊಂದಿಗೆ ನೆಲೆಸಿರುವ ಅರ್ಜಿದಾರರು ಪುಣೆಯ ಕೌಟುಂಬಿಕ ನ್ಯಾಯಾಲಯ ಏಪ್ರಿಲ್ 13ರಂದು ನೀಡಿದ್ದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಪೋಲೆಂಡ್‌ಗೆ ಸ್ಥಳಾಂತರಗೊಳ್ಳುವ ತನ್ನ ಮನವಿಯನ್ನು ಕೆಳ ನ್ಯಾಯಾಲಯ ತಿರಸ್ಕರಿಸಿತ್ತಲ್ಲದೇ ಮಗುವಿನ ಶಾಲೆಯನ್ನು ಬದಲಾಯಿಸದಂತೆ ಮಹಿಳೆಯನ್ನು ನಿರ್ಬಂಧಿಸಿ ಆಕೆಯ ಪಾಸ್‌ಪೋರ್ಟ್ ಅನ್ನು ನ್ಯಾಯಾಲಯಕ್ಕೆ ಠೇವಣಿ ಮಾಡುವಂತೆ ಹೇಳಿತ್ತು.
ಜುಲೈ 8, 2010 ರಂದು ವಿವಾಹವಾಗಿದ್ದ ದಂಪತಿಗೆ, 2013 ಜುಲೈರಂದು ಮಗು ಜನಿಸಿತ್ತು. ಇಂಜಿನಿಯರ್ ಆಗಿರುವ ಮತ್ತು ಪ್ರಮುಖ ಕನ್ಸಲ್ಟೆಂಟ್ ಸೇವೆಯಲ್ಲಿ ಉದ್ಯೋಗಿಯಾಗಿರುವ ಮಹಿಳೆ, ತನ್ನ ಪತಿ ಮತ್ತು ಅತ್ತೆಯ ಸ್ವಭಾವದಿಂದಾಗಿ ತನ್ನ ಕೆಲಸವನ್ನು ತೊರೆಯಬೇಕಾಯಿತು ಎಂದು ಆರೋಪಿಸಿದ್ದಾರೆ.
ಅವರಿಂದ ಅನುಭವಿಸಿದ ಕೆಟ್ಟ ಟ್ರೀಟ್ಮೆಂಟ್, ಅವಮಾನದ ಕಾರಣ, ಅವಳು ತನ್ನ ತಾಯಿಯೊಂದಿಗೆ ಪುಣೆಗೆ ಸ್ಥಳಾಂತರಗೊಂಡಿದ್ದು 2017 ರ ನವೆಂಬರ್‌ನಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು.
ವಿಚ್ಛೇದನ ಅರ್ಜಿ ಬಾಕಿ ಇರುವಂತೆ, ಅವರು ತಮ್ಮ ಅಪ್ರಾಪ್ತ ಮಗಳೊಂದಿಗೆ ಪೋಲೆಂಡ್‌ನ ಕ್ರಾಕೋವ್‌ಗೆ ಸ್ಥಳಾಂತರಗೊಳ್ಳಲು ಅನುಮತಿಯನ್ನು ಕೋರಿದ್ದರು, ಕೆಳ ನ್ಯಾಯಾಲಯ ಆಕೆಯ ಕೋರಿಕೆಯನ್ನು ತಿರಸ್ಕರಿಸಿತ್ತು.
ಬಳಿಕ ಆಕೆಯ ಕಾನೂನು ಸಲಹೆಗಾರರು ಹೈಕೋರ್ಟ್ ಮುಂದೆ ವಾದ ಮಂಡಿಸಿ, ಕೆಲಸದಲ್ಲಿ ಆಕೆಯ ಅತ್ಯುತ್ತಮ ಕಾರ್ಯನಿರ್ವಹಣೆ ಕಾರಣಕ್ಕೆ ಪೋಲೆಂಡ್‌ನ ಕ್ರಾಕೋವ್‌ನಲ್ಲಿರುವ ಸಂಸ್ಥೆಯಲ್ಲಿ ಉನ್ನತ ಸ್ಥಾನವನ್ನು ನೀಡಲಾಗಿದೆ ಎಂದು ವಾದಿಸಿದ್ದರು.
ಪ್ರತಿವಾದಿಯು, ಆಕೆ ಪೋಲೆಂಡ್‌ಗೆ ಸ್ಥಳಾಂತರಗೊಳ್ಳುವುದರ ಹಿಂದಿನ ನಿಜವಾದ ಉದ್ದೇಶವು ತಂದೆ ಮತ್ತು ಮಗಳ ನಡುವಿನ ಬಂಧವನ್ನು ಮುರಿಯುವುದು ಎಂದು ವಾದಿಸಿದ್ದಲ್ಲದೇ, ಆಕೆಯ ಪೊಲೀಂಡ್ ವರ್ಗಾವಣೆ ವಿರೋಧಿಸಿದರು. ಮಗು ಅನ್ಯ ದೇಶಕ್ಕೆ ಸ್ಥಳಾಂತರಗೊಳ್ಳುವುದು ಆಘಾತಕಾರಿ ಎಂದು ಅವರು ವಾದಿಸಿದರು.
ಅಷ್ಟೇ ಅಲ್ಲದೆ ಪೋಲೆಂಡ್‌ನಲ್ಲಿ ಹೆಚ್ಚಿನ ಅಪರಾಧ ಪ್ರಕರಣವಿದೆ. ಪರಮಾಣು ಯುದ್ಧದ ಸಂಭಾವ್ಯತೆಯನ್ನು ಉಲ್ಲೇಖಿಸಿ ಆಕೆಯ ವರ್ಗಾವಣೆ ವಿರೋಧಿಸಿದರು.
ಆದರೆ, ಹೈಕೋರ್ಟ್ ಈ ವಾದ ಒಪ್ಪಲಿಲ್ಲ. ತಂದೆ ಹಾಗೂ ಮಗಳ ಬಾಂಧವ್ಯ ಅಸ್ಥಿರವಾಗದಂತೆ ಖಚಿತಪಡಿಸಿಕೊಳ್ಳಲು ಪ್ರತಿದಿನ ವಿಡಿಯೊ ಕರೆಗೆ ಅವಕಾಶ ನೀಡುವಂತೆ ತಾಯಿಗೆ ಹೈಕೋರ್ಟ್ ಸೂಚಿಸಿದೆ.
ರಜೆಯ ಸಮಯದಲ್ಲಿ ಮಗಳನ್ನು ಮೂರು ಬಾರಿ ಭಾರತಕ್ಕೆ ಕರೆದೊಯ್ಯುವಂತೆ ಸಹ ನಿರ್ದೇಶಿಸಿದೆ. ಹೆಚ್ಚುವರಿಯಾಗಿ, ಮಗಳನ್ನು ಭೇಟಿಯಾಗಲು ತಂದೆ ಪೋಲೆಂಡ್‌ಗೆ ಭೇಟಿ ನೀಡಲು ಅನುಮತಿ ನೀಡಿದ್ದು, ತಾಯಿಗೆ 15 ದಿನಗಳ ಮುಂಚಿತವಾಗಿ ಸೂಚನೆ ನೀಡಬೇಕಾಗುತ್ತದೆ.