ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ರಾಜ್ಯದ 1500 ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿಸುವ ಗುರಿ ಹೊಂದಲಾಗಿದ್ದು, ಈ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲೀಷ್ ಕಲಿಕೆಗೆ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ.
ಶಿಕ್ಷಣ ಸಚಿವ ಬಿ.ಸಿ. ನಾಗೇಶ ಬುಧವಾರದಂದು ಶಿರಸಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುವ ವೇಳೆ ಈ ವಿಷಯ ತಿಳಿಸಿದ್ದು, ಈಗಿರುವ ಶಾಲೆಗಳಲ್ಲೇ ಮಾದರಿ ಶಾಲೆಗಳನ್ನು ಆರಂಭಿಸಲಾಗುತ್ತದೆ. ಅಲ್ಲದೆ ಪ್ರತಿ ತರಗತಿಗೆ ಒಬ್ಬ ಶಿಕ್ಷಕರನ್ನು ಒದಗಿಸಲಾಗುತ್ತದೆ ಎಂದರು.
ಮಲೆನಾಡಿನ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದ್ದು, ಕೆಲವೊಂದು ತರಗತಿಗಳಲ್ಲಿ 12 ರಿಂದ 13 ಮಕ್ಕಳು ಮಾತ್ರ ಕಲಿಯುತ್ತಿದ್ದಾರೆ. ಆದರೂ ಕೂಡ ಯಾವುದೇ ಕಾರಣಕ್ಕೂ ಶಾಲೆ ಮುಚ್ಚುವುದಿಲ್ಲ ಎಂದು ತಿಳಿಸಿದ ಅವರು, ಸಂಸ್ಕೃತವನ್ನು ತೃತೀಯ ಭಾಷೆಯಾಗಿ ಅಳವಡಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದೇವೆ ಎಂದು ಹೇಳಿದರು.