ಹೆಸರಿನಷ್ಟೇ ವಿಭಿನ್ನವಾಗಿರುವ ಫೋನ್ ಒಂದು ಭಾರತದಲ್ಲಿ ಬಿಡುಗಡೆಯಾಗಿದೆ. ಈ ಮೊಬೈಲ್‌ನ ಹೆಸರು ನಥಿಂಗ್ ಫೋನ್ (1). ಈ ಫೋನ್‌ನ ಆರಂಭಿಕ ಬೆಲೆ 32,999 ರೂಪಾಯಿ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778G ಪ್ಲಸ್ ಚಿಪ್‌ಸೆಟ್‌ನೊಂದಿಗೆ ಇತರ ವೈಶಿಷ್ಟ್ಯಗಳನ್ನು ಸಹ ಇದು ಹೊಂದಿದೆ.
OnePlus ಸಹ-ಸಂಸ್ಥಾಪಕ ಕಾರ್ಲ್ ಪೀ ಅವರ ಹೊಸ ಕಂಪನಿ ನಥಿಂಗ್ ಮೊದಲ ಫೋನ್ ಅನ್ನು ಭಾರತ ಸೇರಿದಂತೆ ಜಗತ್ತಿನಾದ್ಯಂತ ಬಿಡುಗಡೆ ಮಾಡಿದೆ. ಭಾರತದಲ್ಲಿ 8GB RAM + 128GB ಸ್ಟೋರೇಜ್ ಹೊಂದಿರೋ ಈ ಸ್ಮಾರ್ಟ್‌ಫೋನ್ ಬೆಲೆ 32,999 ರೂಪಾಯಿ.
ಇದರಲ್ಲೇ 256GB ಸ್ಟೋರೇಜ್ ಹೊಂದಿರುವ ಫೋನ್‌ನ ಬೆಲೆ 35,999 ರೂಪಾಯಿ ಹಾಗೂ 12GB RAM + 256GB ಸ್ಟೋರೇಜ್ ಹೊಂದಿರುವ ಮೊಬೈಲ್‌ಗೆ ಭಾರತದಲ್ಲಿ 38,999 ರೂಪಾಯಿ ನಿಗದಿಪಡಿಸಲಾಗಿದೆ. ನಥಿಂಗ್ ಫೋನ್ (1) ಮೊಬೈಲ್ ಜೊತೆಗೆ ಚಾರ್ಜರ್ ಇರುವುದಿಲ್ಲ. ಬಳಕೆದಾರರು 45W ಅಡಾಪ್ಟರ್‌ಗಾಗಿ 2,499 ರೂಪಾಯಿ ಪಾವತಿಸಬೇಕು. ನಥಿಂಗ್ ಕಂಪನಿಯ ಕ್ಲಿಯರ್ ಕೇಸ್ ಪಡೆಯಲು 1,499 ರೂಪಾಯಿ ಪಾವತಿಸಬೇಕು.
ನಥಿಂಗ್ ಫೋನ್ (1) 6.55-ಇಂಚಿನ OLED ಡಿಸ್‌ಪ್ಲೇ ಹೊಂದಿದೆ. 2,400 x 1,080 ರೆಸಲ್ಯೂಶನ್ ಜೊತೆಗೆ 402 ಪಿಕ್ಸೆಲ್ ಪರ್ ಇಂಚಿನ ಪಿಕ್ಸೆಲ್ ಸಾಂದ್ರತೆಯೊಂದಿಗೆ ಬರುತ್ತದೆ. ಈ ಸ್ಮಾರ್ಟ್‌ಫೋನ್ಗೆ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778G ಪ್ಲಸ್ ಚಿಪ್‌ಸೆಟ್ ಅಳವಡಿಸಲಾಗಿದೆ. ಆಂಡ್ರಾಯ್ಡ್ 12 ಆಧಾರಿತ ಓಎಸ್‌ನಲ್ಲಿ ಇದು ಕಾರ್ಯ ನಿರ್ವಹಿಸುತ್ತದೆ. 3 ವರ್ಷಗಳ ಆಂಡ್ರಾಯ್ಡ್ ನವೀಕರಣ ಮತ್ತು 4 ವರ್ಷಗಳ ಭದ್ರತಾ ನವೀಕರಣವನ್ನು ನೀವು ಪಡೆಯಬಹುದು.
50 ಮೆಗಾಪಿಕ್ಸೆಲ್ ಡ್ಯೂಯೆಲ್ ಕ್ಯಾಮರಾವನ್ನ ಇದು ಹೊಂದಿದೆ. ಗ್ಲಿಫ್ ಇಂಟರ್‌ಫೇಸ್‌ನಿಂದ ನಡೆಸಲ್ಪಡುವ ಎಲ್‌ಇಡಿ ಲೈಟ್ ಸ್ಟ್ರಿಪ್ ಪ್ಯಾಟರ್ನ್ ಪ್ರದರ್ಶಿಸುವ ಫೋನ್‌ನ ಹಿಂಭಾಗದ ಫಲಕ ನಥಿಂಗ್ ಫೋನ್ 1 ನ ಅತಿದೊಡ್ಡ ಹೈಲೈಟ್. 900 ಎಲ್‌ಇಡಿಗಳಿಂದ ಮಾಡಲಾದ ಅನನ್ಯ ಬೆಳಕಿನ ಮಾದರಿಗಳು ಇದರಲ್ಲಿವೆ. ಯಾರು ಕರೆ ಮಾಡುತ್ತಿದ್ದಾರೆ ಮತ್ತು ಅಪ್ಲಿಕೇಶನ್‌ನಿಂದ ಯಾವ ನೋಟಿಫಿಕೇಶನ್ ಬಂದಿದೆ ಎಂಬುದನ್ನು ಇದು ಸಂಕೇತಿಸುತ್ತದೆ, ಚಾರ್ಜಿಂಗ್ ಸ್ಥಿತಿ ಮತ್ತು ಹೆಚ್ಚಿನದನ್ನು ಸೂಚಿಸುತ್ತದೆ. ಫೋಟೋ ತೆಗೆಯುವಾಗ ನೀವು ಫ್ಲ್ಯಾಶ್ ಎಲ್ಇಡಿ ಬದಲಿಗೆ ಮೃದುವಾದ ಬೆಳಕನ್ನು ಬಳಸಬಹುದು.