ಪಠ್ಯ ಪರಿಷ್ಕರಣೆಯಲ್ಲಿ ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ಕುರಿತು ತಿಳಿಸುವ ರಾಜ್ಯ ಸರ್ಕಾರ, ದಲಿತರ ಮೇಲೆ ನಡೆದ ಹತ್ಯಾಕಾಂಡದ ಕುರಿತು ಯಾಕೆ ತಿಳಿಸುವುದಿಲ್ಲ ಎಂದು ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ ಪ್ರಶ್ನಿಸಿದ್ದಾರೆ.
ಮಂಗಳವಾರದಂದು ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಠ್ಯ ಪುಸ್ತಕಗಳಲ್ಲಿ ಹತ್ಯಾಕಾಂಡಗಳ ವಿವರ ಸೇರಿಸಿ ಮಕ್ಕಳಿಗೆ ಬೋಧನೆ ಮಾಡಿದರೆ ಅವರ ಮನಃಸ್ಥಿತಿ ಏನಾಗುತ್ತದೆ ಎಂಬ ಕುರಿತು ಈ ಸರ್ಕಾರಕ್ಕೆ ಕಾಳಜಿ ಇದೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟಿಪ್ಪು ಹಾಗೂ ಹೈದರಾಲಿ ಪಠ್ಯ ತೆಗೆಯುತ್ತೇವೆ ಎಂದು ಹೇಳಿ ಜನರನ್ನು ನಂಬಿಸಿದ್ದ ಸರ್ಕಾರ ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ, ಕುವೆಂಪು ಅವರ ವಿಚಾರಗಳನ್ನು ತಿರುಚುವ ಕೆಲಸ ಮಾಡಿದೆ ಎಂದು ಹೇಳಿದರಲ್ಲದೆ ಶಂಕರಾಚಾರ್ಯರು ಅನೇಕ ಬೌದ್ಧ ಸ್ತೂಪಗಳನ್ನು ಹೊಡೆದು ಹಾಕಿದ್ದಾರೆ. ಅದನ್ನು ಯಾಕೆ ಪಠ್ಯ ಪುಸ್ತಕದಲ್ಲಿ ಸೇರಿಸುವುದಿಲ್ಲ ಎಂದು ಕೇಳಿದರು.