ಬೆಂಗಳೂರು: 2022 ಸಾಲಿನ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿ ಹಿನ್ನೆಲೆಯಲ್ಲಿ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. NDRF ಮತ್ತು SDRF ಮಾರ್ಗಸೂಚಿಯಡಿ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚಿನ ಪರಿಹಾರ ನೀಡಲು ತೀರ್ಮಾನಿಸಲಾಗಿದೆ.
ಮನೆಯ ಗೃಹ ಉಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ, ಮನೆ ದುರಸ್ತಿಗೆ ಹೆಚ್ಚಿನ ಪರಿಹಾರ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಮಾನವ ಜೀವ ಹಾನಿಯಾದರೆ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. NDRF 4 ಲಕ್ಷ ರೂಪಾಯಿ ಜೊತೆಗೆ ರಾಜ್ಯ ಸರ್ಕಾರದಿಂದ 1 ಲಕ್ಷ ರೂ. ನೀಡಲಾಗುತ್ತದೆ. ಗೃಹೋಪಯೋಗಿ ಹಾನಿಗೆ 10,000 ರೂ. ಪರಿಹಾರ ನೀಡಲಾಗುವುದು. NDRF ಮಾರ್ಗಸೂಚಿಯ 3800 ರೂ. ಜೊತೆಗೆ ರಾಜ್ಯದ ಹೆಚ್ಚುವರಿ 6,200ಗಳನ್ನು ನೀಡಲಾಗುವುದು.
ಶೇಕಡ 75ಕ್ಕಿಂತ ಹೆಚ್ಚು ಸಂಪೂರ್ಣ ಮನೆ ಹಾನಿಗೆ ಒಟ್ಟು 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ. NDRF ಮಾರ್ಗಸೂಚಿಯ 95,100 ರೂ. ಜೊತೆಗೆ ರಾಜ್ಯದ ಹೆಚ್ಚುವರಿ 4,04,900 ರೂಪಾಯಿ ಪರಿಹಾರ ನೀಡಲಾಗುತ್ತದೆ. 25 ರಿಂದ ಶೇಕಡ 75 ರಷ್ಟು ತೀವ್ರ ಮನೆ ಹಾನಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಮನೆ ಕೆಡವಿ ಹೊಸ ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ನೀಡಲಾಗುತ್ತದೆ.
NDRF ಮಾರ್ಗಸೂಚಿ ಜೊತೆಗೆ ರಾಜ್ಯದಿಂದ ಹೆಚ್ಚುವರಿ ಮನೆ ದುರಸ್ತಿಗೆ 3 ಲಕ್ಷ ರೂಪಾಯಿ ನೀಡಲಾಗುವುದು. ಶೇಕಡ 15 ರಿಂದ 25ರಷ್ಟು ಭಾಗಶಃ ಹಾನಿಗೊಳಗಾದ ಮನೆಗೆ 50,000 ರೂ.ನೀಡಲಾಗುವುದು. NDRF ಷರತ್ತುಗಳ ಅನ್ವಯ ಪರಿಹಾರ ನೀಡಲು ಜಿಲ್ಲಾಧಿಕಾರಿಗಳಿಗೆ ಅನುಮತಿ ನೀಡಲಾಗಿದೆ.