ಮುಂಗಾರು ಆರಂಭವಾದ ಬೆನ್ನಲ್ಲೇ ದೇಶಾದ್ಯಂತ ಭಾರೀ ಮಳೆಯಾಗುತ್ತಿದೆ. ದಕ್ಷಿಣ ಭಾರತದಲ್ಲಿ, ಅದರಲ್ಲೂ ಕರ್ನಾಟಕ, ಕೇರಳದಲ್ಲಿ ತೀವ್ರ ಮಳೆ ಸುರಿಯುತ್ತಿದ್ದು ಜನಜೀವನದ ಮೇಲೆ ಪರಿಣಾಮ ಬೀರುತ್ತಿದೆ.
ವಾಹನ ಸವಾರರು ಅಪಾಯಕ್ಕೆ ಸಿಲುಕಿದ ಹತ್ತಾರು ಘಟನೆಗಳು ನಡೆದಿವೆ. ಕೇರಳದ ಕಣ್ಣೂರು ಜಿಲ್ಲೆಯ ಸ್ಥಳೀಯರು ಜಲಾವೃತಗೊಂಡ ರಸ್ತೆಯಲ್ಲಿ ಸಿಲುಕಿಕೊಂಡಿದ್ದ ಜೀಪನ್ನು ಹೊರತೆಗೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರವಾಹದ ನೀರಿನಲ್ಲಿ ಸಿಲುಕಿದ ಜೀಪನ್ನು ಮೇಲಕ್ಕೆತ್ತಲು ಅಲ್ಲಿದ್ದ ಜನರೆಲ್ಲ ತಮ್ಮೆಲ್ಲ ಪ್ರಯತ್ನಗಳನ್ನು ಹಾಕುತ್ತಿರುವುದನ್ನು ಕಾಣಬಹುದು. ಜೀಪು ಅರ್ಧದಷ್ಡು ಮುಳುಗಿದ್ದು, ನೀರಿನ ರಭಸಕ್ಕೆ ಇನ್ನೇನು ಕೊಚ್ಚಿ ಹೋಗುತ್ತದೆನ್ನುವಾಗಲೂ 25-30 ಜನ ಹಗ್ಗ ಕಟ್ಟಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಅಂತಿಮವಾಗಿ ಅವರ ಪ್ರಯತ್ನ ಫಲಕೊಟ್ಟಿತೇ ಎಂಬುದು ಖಚಿತವಾಗಿಲ್ಲ.
ಮುಂದಿನ ಐದು ದಿನಗಳ ಕಾಲ ಕೇರಳದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಗಂಟೆಗೆ 65 ಕಿಮೀ ವೇಗದಲ್ಲಿ ಬಲವಾದ ಗಾಳಿ ಸಾಧ್ಯತೆಯಿದೆ ಎಂದು ಐಎಂಡಿ ಎಚ್ಚರಿಸಿದೆ. ತ್ರಿಶೂರ್, ಮಲಪ್ಪುರಂ, ಕೋಝಿಕ್ಕೋಡ್, ವಯನಾಡು, ಕಣ್ಣೂರು ಮತ್ತು ಕಾಸರಗೋಡು ಸೇರಿದಂತೆ ಆರು ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ.
ಜುಲೈ 3 ರಿಂದ 7 ರ ನಡುವೆ ಕೇರಳದಾದ್ಯಂತ ಮಳೆ ಸಂಬಂಧಿತ ಘಟನೆಗಳಲ್ಲಿ ಆರು ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಹಲವಾರು ಮನೆಗಳಿಗೆ ಹಾನಿಯಾಗಿದೆ.