ಬಿಹಾರದ ಮೋತಿಹಾರಿ ಜಿಲ್ಲೆಯಲ್ಲಿ ಶಾಲೆಯ ಹೆಡ್ ಮಾಸ್ಟರ್ ಒಬ್ಬರು ಇಂಗ್ಲಿಷ್ ವ್ಯಾಕರಣಕ್ಕೆ ಸಂಬಂಧಪಟ್ಟ ಅತ್ಯಂತ ಸುಲಭದ ಪ್ರಶ್ನೆಗೆ ಉತ್ತರಿಸಲು ವಿಫಲರಾಗಿದ್ದಾರೆ. ಉಪವಿಭಾಗಾಧಿಕಾರಿಗಳ ತಪಾಸಣೆ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರು ಮುಜುಗರಕ್ಕೀಡಾದ ಘಟನೆ ನಡೆದಿದೆ.
ಎಸ್‌ಡಿಓ ಸರಳ ವಾಕ್ಯರಣವೊಂದನ್ನು ಹಿಂದಿಯಿಂದ ಇಂಗ್ಲಿಷ್‌ಗೆ ಭಾಷಾಂತರಿಸುವಂತೆ ಹೆಡ್‌ಮಾಸ್ಟರ್‌ಗೆ ಸೂಚಿಸಿದ್ದಾರೆ. ಆದ್ರೆ ಟ್ರಾನ್ಸ್‌ಲೇಟ್ ಮಾಡಲು ಹೆಡ್ ಮಾಸ್ಟರ್ ವಿಫಲರಾಗಿದ್ದು, ವಿಡಿಯೋ ಈಗಾಗ್ಲೇ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಬಿಹಾರದಲ್ಲಿ ಶಿಕ್ಷಣ ವ್ಯವಸ್ಥೆ ಯಾವ ಮಟ್ಟಿಗೆ ಹದಗೆಟ್ಟಿದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.
ಪಕ್ಡಿದಯಾಲ್ ಬ್ಲಾಕ್‌ನಲ್ಲಿ ಈ ಸರ್ಕಾರಿ ಶಾಲೆ ಇದೆ. ಎಸ್‌ಡಿಓ ರವೀಂದ್ರ ಕುಮಾರ್, ಶಾಲೆಗೆ ದಿಢೀರ್ ಭೇಟಿಕೊಟ್ರು. ಸೀದಾ ಕ್ಲಾಸ್ ರೂಮಿಗೇ ಬಂದ ಅಧಿಕಾರಿ, ಅಲ್ಲಿ ಪಾಠ ಮಾಡ್ತಾ ಇದ್ದ ಶಿಕ್ಷಕ ಮುಕುಲ್ ಕುಮಾರ್ ಅವರಿಗೆ ಕ್ಲೈಮೇಟ್ ಹಾಗೂ ವೆದರ್‌ಗೆ ಇರುವ ವ್ಯತ್ಯಾಸವೇನು ಎಂದು ಕೇಳಿದ್ರು. ಈ ಪ್ರಶ್ನೆಗೆ ಉತ್ತರಿಸಲು ಶಿಕ್ಷಕ ವಿಫಲರಾಗಿದ್ದಾರೆ.
ನಂತರ ಅಧಿಕಾರಿ, ಶಾಲೆಯ ಹೆಡ್‌ಮಾಸ್ಟರ್ ವಿಶ್ವನಾಥ್ ರಾಮ್ ಅವರ ಕೋಣೆಗೆ ತೆರಳಿದ್ರು. ಅವರು ಕೂಡ ಸುಲಭದ ಪ್ರಶ್ನೆಗೆ ಉತ್ತರಿಸಲು ವಿಫಲರಾದ್ರು. ಈ ಘಟನೆಯ ನಂತರ ಮಾತನಾಡಿದ ಎಸ್‌ಡಿಓ ರವೀಂದ್ರ ಕುಮಾರ್, ಶಿಕ್ಷಕರು ಸ್ವಯಂ ಅಧ್ಯಯನ ಮಾಡುವ ಅಭ್ಯಾಸವನ್ನೇ ಬಿಟ್ಟುಬಿಟ್ಟಿದ್ದಾರೆ. ಶಿಕ್ಷಣ ಇಲಾಖೆ ಶಿಕ್ಷಕರಿಗೆ ಕಾಲಕಾಲಕ್ಕೆ ಸೂಕ್ತ ತರಬೇತಿ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.