ಮಧ್ಯಪ್ರದೇಶದ ಶಿಯೋಪುರ್‌ನಲ್ಲಿರೋ ಚಂಬಲ್ ನದಿಯಲ್ಲಿ ಸ್ನಾನ ಮಾಡ್ತಾ ಇದ್ದ 10 ವರ್ಷದ ಬಾಲಕನನ್ನು ಮೊಸಳೆಯೊಂದು ನುಂಗಿಬಿಟ್ಟಿದೆ. ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಮೊಸಳೆಯನ್ನು ಸೆರೆಹಿಡಿದು ಅದರ ಹೊಟ್ಟೆ ಕತ್ತರಿಸಿ ಬಾಲಕನನ್ನು ಹೊರಕ್ಕೆ ತೆಗೆಯಲು ಮುಂದಾಗಿದ್ದರು.
ಮೊಸಳೆ ಬಾಲಕನನ್ನು ನುಂಗಿದ ವಿಷಯ ಗೊತ್ತಾಗ್ತಿದ್ದಂತೆ ಗ್ರಾಮಸ್ಥರೆಲ್ಲ ನದಿಯ ಬಳಿ ಜಮಾಯಿಸಿದ್ದಾರೆ. ಬಲೆ, ಕೋಲು ಹಾಗೂ ಹಗ್ಗದ ಸಹಾಯದಿಂದ ಮೊಸಳೆಯನ್ನು ಹಿಡಿದು ದಡಕ್ಕೆ ಎಳೆದು ತಂದಿದ್ದಾರೆ. ಮೊಸಳೆಯ ಹೊಟ್ಟೆ ಸೇರಿದ್ದ ಬಾಲಕ ಇನ್ನೂ ಬದುಕಿದ್ದಾನೆ ಎಂಬುದು ಗ್ರಾಮಸ್ಥರ ನಂಬಿಕೆಯಾಗಿತ್ತು.
ಹಾಗಾಗಿ ಮೊಸಳೆಯ ಹೊಟ್ಟೆ ಕತ್ತರಿಸಿ ಬಾಲಕನನ್ನು ಹೊರಗೆ ತೆಗೆಯಲು ಸಜ್ಜಾಗಿದ್ದರು. ಅಷ್ಟರಲ್ಲಿ ಸ್ಥಳಕ್ಕೆ ಬಂದ ಅಧಿಕಾರಿಗಳು ಮೊಸಳೆಯನ್ನು ವಶಕ್ಕೆ ಪಡೆದಿದ್ದಾರೆ. ಸ್ನಾನಕ್ಕೆಂದು ನದಿಗೆ ತೆರಳಿದ್ದ ಬಾಲಕ ಅಂತರ್ ಸಿಂಗ್, ಈಜುತ್ತ ಈಜುತ್ತ ಆಳಕ್ಕೆ ತೆರಳಿರಬಹುದು ಅಂತಾ ಅಧಿಕಾರಿಗಳು ಶಂಕಿಸಿದ್ದಾರೆ.
ಬಾಲಕನನ್ನು ಮೊಸಳೆ ನುಂಗುತ್ತಿರುವುದನ್ನು ಸ್ಥಳೀಯರು ನೋಡಿರುವುದಾಗಿ ಹೇಳ್ತಿದ್ದಾರೆ. ಆದ್ರೆ ಮೊಸಳೆ ಬಾಲಕನನ್ನು ನುಂಗಿರುವುದು ಅನುಮಾನ ಎನ್ನುತ್ತಿದ್ದಾರೆ ಅಧಿಕಾರಿಗಳು. ಬಾಲಕ ನೀರು ಪಾಲಾಗಿರುವ ಶಂಕೆ ಅಧಿಕಾರಿಗಳಿಗೆ ಮೂಡಿದೆ. ಬಾಲಕನ ಪತ್ತೆಗಾಗಿ ನದಿಯಲ್ಲಿ ಶೋಧ ಕಾರ್ಯಾಚರಣೆ ಕೂಡ ನಡೆದಿದೆ.