ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಮದ್ಯವ್ಯಸನಿಯೊಬ್ಬ ಹೆತ್ತ ತಾಯಿ ಮೇಲೆ ಎರಡು ಸಲ ಅತ್ಯಾಚಾರ ಎಸಗಿದ್ದಾನೆ. ದಾಂಡೇಲಿಯ ಅರಣ್ಯ ಇಲಾಖೆ ಡಿಪೋ ಆವರಣದಲ್ಲಿ ಭಾನುವಾರ ಬೆಳಗಿನ ಜಾವ ಘೋರ ಘಟನೆ ನಡೆದಿದೆ.
24 ವರ್ಷದ ಆರೋಪಿ ಕೂಲಿ ಕೆಲಸಗಾರನಾಗಿದ್ದು 52 ವರ್ಷದ ತನ್ನ ತಾಯಿಯೊಂದಿಗೆ ವಾಸವಾಗಿದ್ದ. ಶನಿವಾರ ರಾತ್ರಿ ಮದ್ಯ ಸೇವಿಸಿ ಮನೆಗೆ ಬಂದಿದ್ದ ಆರೋಪಿ ರಾತ್ರಿ 2 ಗಂಟೆ ಸುಮಾರಿಗೆ ಮಾತನಾಡಬೇಕಿದೆ ಎಂದು ತಾಯಿಯನ್ನು ಕರೆದು ಅತ್ಯಾಚಾರ ಎಸಗಿದ್ದಾನೆ. ಇದರಿಂದ ಆಘಾತಕ್ಕೊಳಗಾದ ತಾಯಿ ತಡರಾತ್ರಿ ಮನೆಯ ಹೊರಗೆ ಬಂದು ಕುಳಿತುಕೊಂಡಿದ್ದಾರೆ. ನಂತರ ಮನೆಯೊಳಗೆ ತನ್ನ ಕೊಠಡಿಗೆ ಹೋಗಿದ್ದಾರೆ. ಬೆಳಗ್ಗೆ 6 ಗಂಟೆ ವೇಳೆಗೆ ಮತ್ತೆ ತಾಯಿಯನ್ನು ಕೂಗಿ ಕರೆದ ಆರೋಪಿ ಮತ್ತೆ ಅತ್ಯಾಚಾರ ಎಸಗಿದ್ದಾನೆ. ಸೋಮವಾರ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆನ್ನಲಾಗಿದೆ.