ಬೆಂಗಳೂರು: ಮಹಾರಾಷ್ಟ್ರದ ಬಳಿಕ ಇದೀಗ ಗೋವಾದಲ್ಲಿ ರಾಜಕೀಯ ಬಿಕ್ಕಟ್ಟು ಆರಂಭವಾಗಿದ್ದು, ಗೋವಾ ಕಾಂಗ್ರೆಸ್ ನ ಐವರು ಶಾಸಕರು ಬಂಡಾಯ ಸಾರಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ನ ಐವರು ಶಾಸಕರು ಯಾರ ಸಂಪರ್ಕಕ್ಕೂ ಸಿಗದೇ ನಾಪತ್ತೆಯಾಗಿದ್ದು, ಆಪರೇಷನ್ ಕಮಲದ ಮೂಲಕ ಬಿಜೆಪಿ, ಕೈ ಶಾಸಕರನ್ನು ತನ್ನತ್ತ ಸೆಳೆಯಲು ಯತ್ನಿಸಿದೆ ಎಂಬ ಆರೋಪ ಕೇಳಿಬಂದಿದೆ.
ಗೋವಾ ಕಾಂಗ್ರೆಸ್ ನಲ್ಲಿ ಶಾಸಕರ ಅಸಮಾಧಾನ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದು, ಗೋವಾದಲ್ಲಿ ಕಾಂಗ್ರೆಸ್ ಪಕ್ಷವನ್ನು ಒಡೆಯಲು ಅನೇಕ ವಿಚ್ಛಿದ್ರಕಾರಿ ಶಕ್ತಿಗಳು ಕೈ ಜೋಡಿಸಿವೆ. ಗೋವಾ ಕಾಂಗ್ರೆಸ್‌ನ್ನು ಒಡೆಯುವ ಷಡ್ಯಂತ್ರದ ಹಿಂದೆ ಕೇವಲ ಬಿಜೆಪಿಯಷ್ಟೇ ಅಲ್ಲ, ಅಲ್ಲಿನ ಗಣಿ ಮತ್ತು ಕಲ್ಲಿದ್ದಲಿನ ಲಾಬಿಯೂ ಕೆಲಸ ಮಾಡುತ್ತಿದೆ. ಗಣಿ ಮಾಫಿಯಾ ಮತ್ತು ಬಿಜೆಪಿ ಸರ್ಕಾರ ಗೋವಾವನ್ನು ಪ್ರತಿಪಕ್ಷ ಮುಕ್ತ ರಾಜ್ಯ ಮಾಡುವ ಹುನ್ನಾರದಲ್ಲಿವೆ ಎಂದು ಕಿಡಿಕಾರಿದ್ದಾರೆ.
ಗೋವಾ ರಾಜ್ಯವನ್ನು ಪ್ರತಿಪಕ್ಷ ಮುಕ್ತ ರಾಜ್ಯ ಮಾಡುವ ಬಿಜೆಪಿಯ ಹುನ್ನಾರ ನಡೆಯುವುದಿಲ್ಲ. ಗಣಿ ಮಾಫಿಯಾದ ಜೊತೆ ಷಾಮೀಲಾಗಿರುವ ಗೋವಾದ ಬಿಜೆಪಿ ನೇತೃತ್ವದ ಸರ್ಕಾರ ಪ್ರಜಾಪ್ರಭುತ್ವಕ್ಕೆ ಅಪಚಾರ ಎಸಗುತ್ತಿದೆ. ಗೋವಾ ಕಾಂಗ್ರೆಸ್ ಈ ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧ ಸದಾ ಹೋರಾಡಲಿದೆ. ಬಿಜೆಪಿಯ ಷಡ್ಯಂತ್ರಕ್ಕೆ ಗೋವಾ ಕಾಂಗ್ರೆಸ್ ಯಾವತ್ತೂ ಮಣಿಯುವುದಿಲ್ಲ ಎಂದು ಸರಣಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.