ಸಾಮಾಜಿಕ ಜಾಲತಾಣಗಳು ಎಷ್ಟು ಉಪಯುಕ್ತವೋ ಕೆಲವೊಮ್ಮೆ ಅಷ್ಟೇ ಅಪಾಯಕಾರಿಯಾಗಿ ಪರಿಣಮಿಸುತ್ತವೆ. ಹೀಗಾಗಿ ಇದನ್ನು ಬಳಸುವ ಮುನ್ನ ಸಾಕಷ್ಟು ಎಚ್ಚರ ವಹಿಸಬೇಕಾಗುತ್ತದೆ. ಅದರಲ್ಲೂ ಅಪರಿಚಿತ ಮಹಿಳೆ ಅಥವಾ ಪುರುಷರೊಂದಿಗೆ ಸ್ನೇಹ ಬೆಳೆಸಿದರೆ ಅದು ಸಂಕಷ್ಟವನ್ನೂ ಸಹ ತಂದೊಡ್ಡಬಹುದು.
ಅಂತಹ ಪ್ರಕರಣ ಒಂದರ ವಿವರ ಇಲ್ಲಿದೆ. ಬೆಂಗಳೂರಿನ ಯಲಚೇನಹಳ್ಳಿಯ ಅಕ್ಷಯ ನಗರ ನಿವಾಸಿ ಅವಿನಾಶ್ ಎಂಬವರಿಗೆ ಕೆಲ ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ರಿಯಾ ಮಲ್ಹೊತ್ರ ಎಂಬಾಕೆಯೊಂದಿಗೆ ಪರಿಚಯವಾಗಿದೆ. ಬಳಿಕ ಇವರಿಬ್ಬರೂ ವಿಡಿಯೋ ಕಾಲ್ ಮಾಡಿಕೊಂಡಿದ್ದು, ವಂಚನೆಯ ಜಾಲದ ಅರಿವಿಲ್ಲದೆ ಅವಿನಾಶ್ ಆಕೆಯ ಮಾತನ್ನು ನಂಬಿ ಬೆತ್ತಲಾಗಿದ್ದಾರೆ. ಮುಂದೆ ಅದು ಇವರಿಗೆ ದುಬಾರಿಯಾಗಿ ಪರಿಣಮಿಸಿದೆ.
ಆರಂಭದಲ್ಲಿ ಆಕೆ ಈ ಅಶ್ಲೀಲ ವಿಡಿಯೋಗಳನ್ನು ಅವಿನಾಶ್ ಅವರಿಗೆ ಕಳುಹಿಸಿ ಹಣ ನೀಡುವಂತೆ ಕೇಳಿದ್ದು, ಹಣ ನೀಡದಿದ್ದರೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋಗಳನ್ನು ಹರಿಬಿಡುವುದಾಗಿ ತಿಳಿಸಿದ್ದಾಳೆ. ಆದರೆ ಅವಿನಾಶ್ ಇದಕ್ಕೆ ಸೊಪ್ಪು ಹಾಕಿಲ್ಲ. ಬಳಿಕ ಆಕೆಯ ಜೊತೆಗಿದ್ದ ಹನಿ ಟ್ರ್ಯಾಪ್ ಗ್ಯಾಂಗ್ ಈ ಪ್ರಕರಣಕ್ಕೆ ಎಂಟ್ರಿ ಕೊಟ್ಟಿದೆ.
ರಾಹುಲ್ ಕುಮಾರ್ ಎಂಬಾತ ಅವಿನಾಶ್ ಅವರಿಗೆ ಕರೆ ಮಾಡಿ, ನಾನು ಕ್ರೈಂ ಬ್ರಾಂಚ್ ನಿಂದ ಮಾತನಾಡುತ್ತಿದ್ದೇನೆ. ನಿಮ್ಮ ಪರಿಚಯದ ರಿಯಾ ಮಲ್ಹೊತ್ರ ಸಾವನ್ನಪ್ಪಿದ್ದು, ಇದಕ್ಕೆ ನೀವೇ ಕಾರಣ ಎಂದು ತಿಳಿದು ಬಂದಿದೆ. ನಿಮ್ಮನ್ನು ಈ ಕೇಸ್ ಲಿಸ್ಟ್ ನಿಂದ ಬಿಡಬೇಕೆಂದರೆ ಹಣ ನೀಡಿ ಎಂದು ಬ್ಲಾಕ್ ಮೇಲ್ ಮಾಡಿದ್ದಾನೆ.
ಇದನ್ನು ನಂಬಿದ ಅವರು ಹಂತ ಹಂತವಾಗಿ 5.57 ಲಕ್ಷ ರೂಪಾಯಿಗಳನ್ನು ಆನ್ಲೈನ್ ಮೂಲಕ ವರ್ಗಾವಣೆ ಮಾಡಿದ್ದು, ಮತ್ತಷ್ಟು ಹಣ ನೀಡುವಂತೆ ವಂಚಕರು ಒತ್ತಡ ಹೇರತೊಡಗಿದ್ದಾರೆ. ಇದರಿಂದ ಕಂಗಾಲದ ಅವಿನಾಶ್ ಇದೀಗ ಆಗ್ನೇಯ ವಿಭಾಗದ ಸೈಬರ್ ಕ್ರೈಮ್ ಠಾಣೆಗೆ ದೂರು ನೀಡಿದ್ದಾರೆ.