ನವದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ವಿಜಯ್ ಮಲ್ಯಗೆ 4 ತಿಂಗಳ ಜೈಲು ಶಿಕ್ಷೆ ವಿಧಿಸಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.
ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಉದ್ಯಮಿ ವಿಜಯ್ ಮಲ್ಯ ತಪ್ಪಿತಸ್ಥ ಎಂದು ಸುಪ್ರೀಂ ಕೋರ್ಟ್ ಘೋಷಿಸಿತ್ತು. ಆದರೆ ಶಿಕ್ಷೆ ಪ್ರಮಾಣ ಕುರಿತ ತೀರ್ಪನ್ನು ಕಾಯ್ದಿರಿಸಲಾಗಿತ್ತು. ಇಂದು ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಾದ ಉದಯ್ ಲಲಿತ್, ಪಿ.ಎಸ್.ನರಸಿಂಹ, ಎಸ್.ರವೀಂದ್ರ ಭಟ್ ಅವರಿದ್ದ ವಿಭಾಗೀಯ ಪೀಠ, ವಿಜಯ್ ಮಲ್ಯಗೆ 4 ತಿಂಗಳ ಜೈಲು ಶಿಕ್ಷೆ ಹಾಗೂ 2000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.
2017ರಲ್ಲಿ ಕೋರ್ಟ್ ಆದೇಶ ಉಲ್ಲಂಘಿಸಿ ವಿಜಯ್ ಮಲ್ಯ ತಮ್ಮ ಮಕ್ಕಳಿಗೆ $40 ಮಿಲಿಯನ್ ಹಣ ವರ್ಗಾವಣೆ ಮಾಡಿದ್ದರು. ಲಿಯಾನಾ, ತಾನ್ಯಾ ಹಾಗೂ ಸಿದ್ಧಾರ್ಥ್ ಮಲ್ಯಗೆ ಹಣ ವರ್ಗಾವಣೆ ಮಾಡಿದ್ದರು. ಈ ಪ್ರಕರಣದ ಬಗ್ಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
9,000 ಕೋಟಿ ಸಾಲ ಪ್ರಕರಣಕ್ಕೆ ಸಂಬಂದಿಸಿದಂತೆ ಈಗಗಾಲೇ ಭಾರತ ಬಿಟ್ಟು ಪರಾರಿಯಾಗಿರುವ ವಿಜಯ್ ಮಲ್ಯ ಲಂಡನ್ ನಲ್ಲಿ ತಲೆಮರೆಸಿಕೊಂಡಿದ್ದು, ಇದೀಗ ಜೈಲುಶಿಕ್ಷೆ ಪ್ರಕಟವಾಗಿರುವ ಬೆನ್ನಲ್ಲೇ ಭಾರತಕ್ಕೆ ಹಸ್ತಾಂತರವಾಗುವ ಸಾಧ್ಯತೆ ಇದೆ.