ಸಾಮಾಜಿಕ ಜಾಲತಾಣ ಟ್ವಿಟರ್ ಖರೀದಿಸಲು ನಿರ್ಧರಿಸಿದ್ದ ಸ್ಪೇಸ್ ಎಕ್ಸ್ ಸಿಇಒ ಎಲಾನ್ ಮಸ್ಕ್ ಈಗ ತಮ್ಮ ತೀರ್ಮಾನದಿಂದ ಹಿಂದೆ ಸರಿದಿದ್ದಾರೆ. ಈ ಕುರಿತು ಈಗಾಗಲೇ ಎಲಾನ್ ಮಸ್ಕ್ ತಂಡ ಟ್ವಿಟರ್ ಸಂಸ್ಥೆಗೆ ಮಾಹಿತಿ ನೀಡಿದೆ. ನಕಲಿ ಟ್ವಿಟರ್ ಖಾತೆಗಳ ಕುರಿತು ಸ್ಪಷ್ಟ ಮಾಹಿತಿ ನೀಡದಿರುವುದೇ ಮಸ್ಕ್ ಖರೀದಿ ಒಪ್ಪಂದದಿಂದ ಹಿಂದೆ ಸರಿಯಲು ಕಾರಣವೆಂದು ಹೇಳಲಾಗಿದೆ.
ಟ್ವಿಟರ್ ಖರೀದಿಗೆ 44 ಬಿಲಿಯನ್ ಅಮೆರಿಕನ್ ಡಾಲರ್ ಒಪ್ಪಂದವನ್ನು ಎಲಾನ್ ಮಸ್ಕ್ ಮಾಡಿಕೊಂಡಿದ್ದು, ಇದು ವಿಶ್ವದ ಅತಿ ದೊಡ್ಡ ಡೀಲ್ ಎಂದು ಹೇಳಲಾಗಿತ್ತು. ಇದೀಗ ಮಸ್ಕ್ ತಮ್ಮ ನಿರ್ಧಾರದಿಂದ ಹಿಂದೆ ಸರಿದಿರುವ ಕಾರಣ ಟ್ವಿಟರ್ ಶೇರುಗಳ ಬೆಲೆಯಲ್ಲಿ ಕುಸಿತವಾಗಿದೆ. ಅಲ್ಲದೆ ಮಸ್ಕ್ ಟ್ವಿಟ್ಟರ್ ಖರೀದಿಸುವ ನಿರ್ಧಾರ ಕೈಗೊಂಡಾಗ ಕಂಪನಿ ಕೆಲವೊಂದು ತೀರ್ಮಾನಗಳನ್ನು ಕೈಗೊಂಡಿತ್ತು.
ಇದೀಗ ಎಲಾನ್ ಮಸ್ಕ್ ಒಪ್ಪಂದದಿಂದ ಹಿಂದೆ ಸರಿದಿರುವ ಕಾರಣ ಟ್ವಿಟರ್ ಸಂಸ್ಥೆ ಅವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದೆ. ಹೀಗಾಗಿ ನ್ಯೂಯಾರ್ಕ್ ಮೂಲದ ಅತಿ ದೊಡ್ಡ ಪ್ರಸಿದ್ಧ ಕಾನೂನು ಸಂಸ್ಥೆಯನ್ನು ಟ್ವಿಟರ್ ಸಂಪರ್ಕಿಸಿದ್ದು ಮುಂದಿನ ವಾರದೊಳಗೆ ಡೆಲ್ವೇರ್ ನಲ್ಲಿ ಮೊಕದ್ದಮೆ ದಾಖಲಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಸ್ಪೇಸ್ ಎಕ್ಸ್ ಕಂಪನಿಯೂ ಸಹ ಎಲಾನ್ ಮಸ್ಕ್ ಪರ ವಾದ ಮಾಡಲು ಘಟಾನುಘಟಿ ವಕೀಲರುಗಳನ್ನು ಕಣಕ್ಕಿಳಿಸುತ್ತಿದೆ ಎಂದು ಹೇಳಲಾಗಿದೆ.