ಬೆಂಗಳೂರು: ಬಾಟ್ಲಾಹೌಸ್ ಎನ್ ಕೌಂಟರ್ ನಲ್ಲಿ ಭಯೋತ್ಪಾದಕರು ಸತ್ತಾಗ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕಣ್ಣೀರು ಹಾಕಿದ್ದರು. ಉಗ್ರರನ್ನು ಎನ್ ಕೌಂಟರ್ ಮಾಡಿದ್ದಕ್ಕೆ ಸೋನಿಯಾ ಗಾಂಧಿ ಅತ್ತಿದ್ದಾರೆ. ಕಾಂಗ್ರೆಸ್ ನಾಯಕರದ್ದು ಭಯೋತ್ಪಾದಕರ ಪರವಾದ ಧ್ವನಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ನಡೆದ ಅಸಂಘಟಿತ ಕಾರ್ಮಿಕ ಪ್ರಕೋಷ್ಠದ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಪ್ರಹ್ಲಾದ್ ಜೋಶಿ, ಬಾಟ್ಲಾಹೌಸ್ ಎನ್ ಕೌಂಟರ್ ನಲ್ಲಿ ಭಯೋತ್ಪಾದಕರು ಮೃತಪಟ್ಟಾಗ ಸೋನಿಯಾ ಗಾಂಧಿ ಕಣ್ಣೀರು ಹಾಕಿದ್ದರು. ಈ ಬಗ್ಗೆ ಕಾಂಗ್ರೆಸ್ ಪಕ್ಷವೇ ಹೇಳಿಕೆ ನೀಡಿತ್ತು. ತುಕಡೆ ಗ್ಯಾಂಗ್ ಅಫ್ಜಲ್ ಗುರು ಪರ ಘೋಷಣೆ ಹಾಕಿದಾಗ ಅವರ ಪರ ನಿಂತವರು ರಾಹುಲ್ ಗಾಂಧಿ. ಕಾಂಗ್ರೆಸ್ ಪಕ್ಷದ ನೀತಿಗಳೇ ದೇಶದಲ್ಲಿ ಭಯೋತ್ಪಾದನೆಗೆ ಕಾರಣವಾಗಿದೆ ಎಂದು ಕಿಡಿಕಾರಿದ್ದಾರೆ.
ದೇಶದ ಯಾವುದೇ ಭಾಗದಲ್ಲಿ ಪ್ರಸ್ತುತ ಭಯೋತ್ಪಾದನೆ ನಡೆಯುತ್ತಿಲ್ಲ. ಹಾಗಾಗಿ ಕಾಂಗ್ರೆಸ್ ಗೆ ವೋಟ್ ಬ್ಯಾಂಕ್ ರಾಜಕಾರಣ ಮಾಡಲು ಸಾಧ್ಯವಾಗುತ್ತಿಲ್ಲ. ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ಆರ್ಟಿಕಲ್ 370 ರದ್ದು ಮಾಡಿದ್ದೂ ಕೂಡ ಭಯೋತ್ಪಾದನೆ ನಿರ್ನಾಮವಾಗಲು ಪ್ರಮುಖ ಕಾರಣ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಸರ್ಕಾರದ ಜನಪರ ಕೆಲಸಗಳು, ರಾಜ್ಯದಲ್ಲಿ ಬೊಮ್ಮಾಯಿ ಸರ್ಕಾರ ಮಾಡುವ ಯೋಜನೆಗಳು ಜನರಿಗೆ ತಲುಪಬಾರದು ಎಂಬ ದುರುದ್ದೇಶದಿಂದ ಕಾಂಗ್ರೆಸ್ ನಾಯಕರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಗುಡುಗಿದರು.