ಕತಿಹಾರ್: ಮಧ್ಯಾಹ್ನದ ಊಟದ ಯೋಜನೆ ಅನುಷ್ಠಾನದಲ್ಲಿ ವ್ಯತ್ಯಾಸವಾಗಿದೆ ಎಂದು ಆರೋಪಿಸಿ ಶಾಲಾ ವಿದ್ಯಾರ್ಥಿಗಳು ಗಲಾಟೆ ಸೃಷ್ಟಿಸಿ ಶಾಲೆಯ ಆಸ್ತಿ-ಪಾಸ್ತಿಯನ್ನು ಧ್ವಂಸಗೊಳಿಸಿರುವ ಆಘಾತಕಾರಿ ಘಟನೆ ಬಿಹಾರದ ಕತಿಹಾರ್ ಜಿಲ್ಲೆಯಲ್ಲಿ ನಡೆದಿದೆ. ಘಟನೆಯ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.
ವರದಿಗಳ ಪ್ರಕಾರ, ವಿದ್ಯಾರ್ಥಿಗಳು ಶಾಲೆಯಲ್ಲಿ ಮಧ್ಯಾಹ್ನದ ಊಟವನ್ನು ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಶಿಕ್ಷಕರು ತಮಗೆ ಪಾಠ ಹೇಳಿ ಕೊಡುವ ಬದಲು ಮಸಾಜ್ ಮಾಡಲು ಹೇಳುತ್ತಾರೆ ಎಂಬುದು ವಿದ್ಯಾರ್ಥಿಗಳು ಮಾಡಿರುವ ಆರೋಪವಾಗಿದೆ.
ಕತಿಹಾರ್ನ ಬರ್ಸೋಯ್ ಬ್ಲಾಕ್ನ ಅಬಾದ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬರಿಯುಲ್ ಮೇಲ್ದರ್ಜೆಗೇರಿದ ಮಿಡಲ್ ಸ್ಕೂಲ್ನಲ್ಲಿ ಈ ಘಟನೆ ವರದಿಯಾಗಿದೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿದ್ಯಾರ್ಥಿಗಳು ಶಾಲೆಗೆ ಅಳವಡಿಸಲಾಗಿದ್ದ ಟಿನ್ ಶೀಟ್ ಅನ್ನು ಧ್ವಂಸಗೊಳಿಸುತ್ತಿರುವುದನ್ನು ಕಾಣಬಹುದು.
ಶಾಲಾ ಆವರಣದಲ್ಲಿ ಗಲಾಟೆ ಸೃಷ್ಟಿಸಲು ಗ್ರಾಮಸ್ಥರು ವಿದ್ಯಾರ್ಥಿಗಳನ್ನು ಪ್ರಚೋದಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಆದರೆ, ಜಿಲ್ಲಾಡಳಿತ ಈ ಪ್ರಕರಣವನ್ನು ಗಮನದಲ್ಲಿಟ್ಟುಕೊಂಡು ತನಿಖೆಗೆ ಆದೇಶಿಸಿದೆ.
ಶಾಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟವನ್ನು ನಿಯಮಿತವಾಗಿ ನೀಡುತ್ತಿಲ್ಲ ಎಂದು ಆರೋಪಿಸಿದರು. ಅಲ್ಲದೆ ಶಿಕ್ಷಕರು ಮಸಾಜ್ ಮಾಡಲು ಹೇಳುತ್ತಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಘಟನೆಯ ನಂತರ ಕ್ಷೇತ್ರ ಶಿಕ್ಷಣಾಧಿಕಾರಿ ಮುಮ್ತಾಜ್ ಅಹಮದ್ ಶಾಲೆಯ ಮುಖ್ಯೋಪಾಧ್ಯಾಯ ಗೋಪೈನ್ ಚಂದ್ರ ಅವರೊಂದಿಗೆ ಮಾತನಾಡಿದ್ದಾರೆ. ಇದೊಂದು ನಾಚಿಕೆಗೇಡಿನ ಸಂಗತಿಯಾಗಿದೆ. ಅಲ್ಲದೆ ಈ ಬಗ್ಗೆ ತನಿಖೆಗೆ ಆದೇಶಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.