ಶ್ರೀನಗರ: ಪವಿತ್ರ ಯಾತ್ರಾಸ್ಥಳ ಅಮರನಾಥ್ ನಲ್ಲಿ ಸಂಭವಿಸಿದ ಮೇಘಸ್ಫೋಟದಲ್ಲಿ ಯಾತ್ರಿಕರನ್ನು ರಕ್ಷಿಸಲು ಯತ್ನಿಸಿದ್ದ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ಇವರು ಕೇವಲ 9 ದಿನಗಳ ಹಿಂದಷ್ಟೇ ಸೇವೆಯಿಂದ ನಿವೃತ್ತರಾಗಿದ್ದರು ಎಂದು ತಿಳಿದುಬಂದಿದೆ.
ಅಮರನಾಥ್ ಗುಹೆ ಬಳಿ ಭಾರಿ ಮೇಘಸ್ಫೋಟದಿಂದಾಗಿ ಏಕಾಏಕಿ ಪ್ರವಾಹ ಸಂಭವಿಸಿದ್ದು, ದುರಂತದಲ್ಲಿ 16 ಜನರು ಸಾವನ್ನಪ್ಪಿದ್ದಾರೆ. 40ಕ್ಕೂ ಹೆಚ್ಚು ಜನರು ಕಣ್ಮರೆಯಾಗಿದ್ದಾರೆ. ಪ್ರವಾಹದಲ್ಲಿ ಸಿಲುಕಿದವರನ್ನು ರಕ್ಷಿಲು ಯತ್ನಿಸಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಸುಶೀಲ್ ಖತ್ರಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ.
ಸುಶೀಲ್ ಖಾತ್ರಿ ಶ್ರೀ ಗಂಗಾನಗರ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಮೇಘಸ್ಫೋಟಕ್ಕೆ ಸಿಲುಕಿದ್ದ ಯಾತ್ರಿಕರನ್ನು ರಕ್ಷಿಸಲು ಹೋಗಿದ್ದಾರೆ. ಪ್ರವಾಹದ ಹೊಡೆತಕ್ಕೆ ಸಿಲುಕಿದ್ದ ಹಲವು ಯಾತ್ರಿಕರನ್ನು ಸುಶೀಲ್ ರಕ್ಷಿಸಿದ್ದರು. ಯಾತ್ರಿಕರನ್ನು ರಕ್ಷಣೆ ಮಾಡುವ ವೇಳೆ ಪ್ರವಾಹದ ಹೊಡೆತಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಯಾತ್ರಿಕರನ್ನು ರಕ್ಷಿಸಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಪ್ರವಾಹದ ಸುಳಿಯಲ್ಲಿ ಸಿಲುಕಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.