ಬೆಂಗಳೂರು: ಮಳೆಯಿಂದಾದ ಮನೆ ಹಾನಿಗೆ ತಕ್ಷಣಕ್ಕೆ 10 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು. ಮಳೆ ನಿಂತ ಬಳಿಕ ಬೆಳೆ ಹಾನಿ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಜಿಲ್ಲಾಧಿಕಾರಿಗಳೊಂದಿಗಿನ ಸಭೆಯ ನಂತರ ಮಾತನಾಡಿದ ಅವರು, 13 ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದೆ. ಒಂದು ತಿಂಗಳಲ್ಲಿ 12 ಜನ ಸಾವನ್ನಪ್ಪಿದ್ದಾರೆ. ಮಳೆಯಿಂದಾಗಿ 65 ಜಾನುವಾರು ಮೃತಪಟ್ಟಿವೆ. ಮಳೆಪೀಡಿತ ಜಿಲ್ಲೆಗಳಲ್ಲಿ NDRF, SDRF ಪಡೆ ಬಳಕೆ ಮಾಡಿಕೊಳ್ಳಲಾಗುತ್ತದೆ. ಭೂಕುಸಿತ ಸ್ಥಳದಿಂದ ಜನರ ಸ್ಥಳಾಂತರಕ್ಕೆ ಸೂಚನೆ ನೀಡಲಾಗಿದೆ ಎಂದರು.
ಇನ್ನು ಮೂರು ದಿನಗಳ ಕಾಲ ಮಳೆಯ ಮುನ್ಸೂಚನೆ ನೀಡಲಾಗಿದೆ. ತಂತ್ರಜ್ಞಾನ ಬಳಸಿಕೊಂಡು ಕಡಲ ಕೊರೆತ ತಡೆಗೆ ಕ್ರಮ ಕೈಗೊಳ್ಳಲಾಗುವುದು. ಮಳೆಗೆ ಬಿದ್ದಿರುವ ವಿದ್ಯುತ್ ಕಂಬಗಳನ್ನು ಸರಿಪಡಿಸಲು ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಜೊತೆಗಿನ ಸಭೆಯ ಬಳಿಕ ಸಿಎಂ ತಿಳಿಸಿದ್ದಾರೆ.