ಕಾರವಾರ: ಕರಾವಳಿ ಜಿಲ್ಲೆಗಳು ಮಳೆ ಅವಾಂತರದಿಂದ ತತ್ತರಿಸಿದ್ದು, ಉತ್ತರ ಕನ್ನಡ ಜಿಲ್ಲೆಯಾದ್ಯಂತ ನಿರಂತರ ಸುರಿಯುತ್ತಿರುವ ಮಳೆಗೆ ಹಲವೆಡೆ ಗುಡ್ಡ ಕುಸಿತವುಂಟಾಗಿದ್ದರೆ ಇನ್ನು ಹಲವೆಡೆಗಳಲ್ಲಿ ರಸ್ತೆಗಳು ಜಲಾವೃತಗೊಂಡು ವಾಹನ ಸಂಚಾರವೇ ಅಸಾಧ್ಯವಾಗಿದೆ.
ಭಾರಿ ಮಳೆಯಿಂದಾಗಿ ಕಾರವಾರದ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ. ವರುಣಾರ್ಭಟಕ್ಕೆ ನದಿಗಳು ತುಂಬಿ ಹರಿಯುತ್ತಿದ್ದು, ರಸ್ತೆಗಳು ಜಲಾವೃತಗೊಂಡಿವೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ರಸ್ತೆ ನದಿಯಂತಾಗಿದೆ. ಈ ಹಿನ್ನೆಲೆಯಲ್ಲಿ ಬಿಣಗಾದ ನೌಕಾನೆಲೆಯ ಕಾಮತ್ ಗೇಟ್ ಬಳಿ ರಸ್ತೆ ಸಂಪೂರ್ಣ ಬಂದ್ ಆಗಿದ್ದು, ವಾಹನ ಸಂಚಾರಕ್ಕೆ ಅಡ್ದಿಯುಂಟಾಗಿದೆ.
ಇದರಿಂದ ಮಂಗಳೂರು, ಹುಬ್ಬಳ್ಳಿ, ಶಿರಸಿ, ಶಿವಮೊಗ್ಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ಥಗೊಂಡಿದ್ದು, ವಾಹನಗಳು ಸಾಲುಗಟ್ಟಿ ನಿಂತಿವೆ. ವಾಹನ ಸಂಚಾರ ಸಾಧ್ಯವಾಗದೇ ಜನರು ಪರದಾಡುವಂತಾಗಿದೆ.