ಯಜ್ಞೋಪವೀತಕ್ಕೆ ಉಪವೀತ, ಯಜ್ಞಸೂತ್ರ, ವ್ರತಬಂಧ, ಬಲಬಂಧ, ಮೊನೀಬಂಧ ಹಾಗೂ ಬ್ರಹ್ಮಸೂತ್ರ ಎಂಬ ಹಲವಾರು ಹೆಸರುಗಳಿವೆ. ಕನ್ನಡದಲ್ಲಿ ಯಜ್ಞೋಪವೀತಕ್ಕೆ ಜನಿವಾರವೆಂದು ಕರೆಯುತ್ತಾರೆ. ಯಜ್ಞೋಪವೀತವನ್ನು ಧರಿಸುವ ಪರಂಪರೆ ಬಹಳ ಪ್ರಾಚೀನವಾಗಿದ್ದು, ಉಪನಯನದ ನಂತರ ಯಜ್ಞೋಪವೀತವನ್ನು ಧರಿಸಲಾಗುತ್ತದೆ.
ಹಿಂದೂ ಧರ್ಮದ ಷೋಡಶ ಸಂಸ್ಕಾರಗಳಲ್ಲಿ ಉಪನಯನವೂ ಒಂದು. ಉಪನಯನ ಸಂಸ್ಕಾರದಲ್ಲಿ ಯಜ್ಞೋಪವೀತದ ಧಾರಣೆಯಾಗುತ್ತದೆ. ಉಪನಯನವನ್ನು ಸಾಮಾನ್ಯವಾಗಿ ಹದಿನೈದು ವರ್ಷದೊಳಗೆ ಮಾಡಲಾಗುತ್ತದೆ.
ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿ ಹಲವು ನಿಯಮಗಳನ್ನು ಪಾಲಿಸಲೇ ಬೇಕಾಗುತ್ತದೆ. ಒಂದು ಸಲ ಜನಿವಾರವನ್ನು ಧರಿಸಿದ ಮೇಲೆ ಯಾವುದೇ ಕಾರಣಕ್ಕೂ ಜನಿವಾರವನ್ನು ಧರಿಸದೇ ಇರುವಂತಿಲ್ಲ. ಜನಿವಾರ ಹಳೆಯದಾದರೆ ಅಥವಾ ತುಂಡಾದರೆ ಅದನ್ನು ವಿಸರ್ಜಿಸಿ ಕೂಡಲೇ ಹೊಸ ಜನಿವಾರವನ್ನು ಧರಿಸ ಬೇಕಾಗುತ್ತದೆ.
ಪ್ರತಿಯೊಬ್ಬ ಹಿಂದುವೂ ಜನಿವಾರವನ್ನು ಧರಿಸಬಹುದು. ಅದಕ್ಕೆ ಯಾವುದೇ ಅಡೆತಡೆಗಳಿಲ್ಲ. ಆದರೆ ಜನಿವಾರವನ್ನು ಧರಿಸಿದ ಮೇಲೆ ಅದರ ನಿಯಮಗಳನ್ನು ಪಾಲಿಸಬೇಕಷ್ಟೆ. ನಿಯಮಗಳನ್ನು ಪಾಲಿಸದ ವ್ಯಕ್ತಿಯ ಯಜ್ಞೋಪವೀತ ಕೇವಲ ದಾರದ ಎಳೆ ಧರಿಸಿದಂತಾಗುತ್ತದೆ.
ಬ್ರಹ್ಮಚಾರಿಗಳು ಒಂದು ಯಜ್ಞೋಪವೀತ, ಗೃಹಸ್ಥರು ಎರಡು ಯಜ್ಞೋಪವೀತಗಳನ್ನು ಧರಿಸ ಬೇಕೆಂದು ಶಾಸ್ತ್ರಗಳು ಹೇಳಿವೆ. ಗೃಹಸ್ಥರ ಒಂದು ಯಜ್ಞೋಪವೀತ ಅವರ ಮಡದಿಗೆ ಮುಡಿಪಾಗಿರುತ್ತದೆ.
ಯಜ್ಞೋಪವೀತದಲ್ಲಿರುವ ಬ್ರಹ್ಮಗಂಟು ಐದು ಗಂಟುಗಳಿಂದ ಕೂಡಿರುತ್ತದೆ. ಐದು ಗಂಟುಗಳು ಬ್ರಹ್ಮಜ್ಞಾನ, ಧರ್ಮ, ಅರ್ಥ, ಕಾಮ ಹಾಗೂ ಮೋಕ್ಷದ ಪ್ರತೀಕವಾಗಿದೆ. ಹಾಗೇ ಪಂಚ ಯಜ್ಞ, ಪಂಚ ಜ್ಞಾನೇಂದ್ರಿಯ, ಪಂಚ ಕರ್ಮಗಳನ್ನು ಪ್ರತಿನಿಧಿಸುತ್ತದೆ.
ಯಜ್ಞೋಪವೀತದ ಧಾರಣೆ ಗಾಯತ್ರಿ ಮಂತ್ರದಿಂದಾಗುತ್ತದೆ. ಗಾಯತ್ರಿ ಮಂತ್ರ ಹಾಗೂ ಯಜ್ಞೋಪವೀತದ ಸಮ್ಮಿಲನವೇ ದ್ವಿಜತ್ವ. ಯಜ್ಞೋಪವೀತದಲ್ಲಿ ಮೂರು ಎಳೆಗಳಿರುತ್ತವೆ. ಹಾಗೇ ಗಾಯತ್ರಿ ಮಂತ್ರದಲ್ಲೂ ಸಹ ಮೂರು ಚರಣಗಳಿವೆ. “ತತ್ಸವಿತುರ್ವರೇಣ್ಯಮ್” ಮೊದಲ ಚರಣ. “ಭರ್ಗೋ ದೇವಸ್ಯ ಧೀಮಹೀ” ಎರಡನೇ ಚರಣ”. “ಧಿಯೋ ಯೋನಃ ಪ್ರಚೋದಯಾತ್” ಮೂರನೇ ಚರಣ.
ಯಜ್ಞೋಪವೀತವನ್ನು ಧರಿಸುವಾಗ ಹೇಳುವ ಮಂತ್ರ:-
ಯಜ್ಞೋಪವೀತಂ ಪರಮಂ ಪವಿತ್ರಂ ಪ್ರಜಾಪತೇರ್ಯತ್ಸಹಜಂ ಪುರಸ್ತಾತ್ |
ಆಯುಷ್ಯಮಗ್ರಂ ಪ್ರತಿಮುಂಚ ಶುಭ್ರಂ ಯಜ್ಞೋಪವೀತಂ ಬಲಮಸ್ತು ತೇಜಃ ||
ಅರ್ಥ: ಯಜ್ಞೋಪವೀತ ಪರಮ ಪವಿತ್ರವಾದದ್ದು, ಬ್ರಹ್ಮನಿಗಿಂತಲೂ ಮೊದಲೇ ಉತ್ಪನ್ನಗೊಂಡಿದ್ದು,ಆಯುಷ್ಯವನ್ನು ಹೆಚ್ಚಿಸಿ, ಮನುಷ್ಯನನ್ನು ಶುಭ್ರ ಮಾಡುವಂತದ್ದು, ಯಜ್ಞೋಪವೀತ ನಮ್ಮ ಮಾನಸಿಕ ಬಲ ಹಾಗೂ ತೇಜಸ್ಸನ್ನು ಹೆಚ್ಚಿಸುವಂತದ್ದು. ಹಾಗಾಗಿ ಯಜ್ಞೋಪವೀತ ಧಾರಣೆಗೆ ನಮ್ಮ ಸಂಸ್ಕೃತಿಯಲ್ಲಿ ವಿಶೇಷ ಮಹತ್ವವನ್ನು ನೀಡಲಾಗಿದೆ.
ಯಜ್ಞೋಪವೀತದ ನಿಯಮಗಳು
ಮಲ, ಮೂತ್ರಗಳನ್ನು ವಿಸರ್ಜಿಸುವಾಗ ಜನಿವಾರವನ್ನು ಎಡಗಿವಿಯ ಮೇಲೆ ಹಾಕಿ ಕೊಳ್ಳಬೇಕು. ಕೈ, ಕಾಲುಗಳನ್ನು ತೊಳೆದು ಶುಚಿಯಾದ ಬಳಿಕವಷ್ಟೇ ಅದನ್ನು ಪುನಃ ಸರಿ ಮಾಡಿ ಕೊಳ್ಳಬೇಕು
ಯಜ್ಞೋಪವೀತದ ಎಳೆ ತುಂಡಾದರೆ ಬದಲಿಸಬೇಕು. ತುಂಡಾಗಿರುವ ಜನಿವಾರವನ್ನು ಧರಿಸಿರ ಬಾರದು.
ಜನನ ಹಾಗೂ ಮರಣದ ಅಶೌಚದ ನಂತರ ಯಜ್ಞೋಪವೀತವನ್ನು ಬದಲಿಸ ಬೇಕು.
ಯಜ್ಞೋಪವೀತವನ್ನು ಶರೀರದಿಂದ ಹೊರಗೆ ತೆಗೆಯಬಾರದು.
ಯಜ್ಞೋಪವೀತದ ವೈಜ್ಞಾನಿಕ ಮಹತ್ವ
ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿ ನಿಯಮಗಳಿಂದ ಬಂಧಿತನಾಗುತ್ತಾನೆ. ಅದು ವ್ಯಕ್ತಿಯನ್ನು ಸಾತ್ವಿಕ ಜೀವನದತ್ತ ಕೊಂಡೊಯ್ಯುತ್ತದೆ. ಸಾತ್ವಿಕ ಆಹಾರ ಹಾಗೂ ಸಾತ್ವಿಕ ಜೀವನವನ್ನು ನಡೆಸುವುದರಿಂದ ವ್ಯಕ್ತಿ ದೈಹಿಕ ಆರೋಗ್ಯವನ್ನು ಪಡೆದು ದೀರ್ಘಾಯುಷ್ಯವನ್ನು ಹೊಂದುತ್ತಾನೆ. ಮಲ, ಮೂತ್ರ ವಿಸರ್ಜನೆಯ ನಂತರ ತನ್ನ ಮುಖ, ಹಲ್ಲುಗಳನ್ನು ಸ್ವಚ್ಛ ಪಡಿಸಿ ಕೊಳ್ಳುವುದರಿಂದ ವಿಷಾಣುಗಳು ನಾಶಗೊಳ್ಳುತ್ತವೆ.
ಬಲಗಿವಿಯ ಭಾಗದಲ್ಲಿರುವ ಒಂದು ವಿಶೇಷ ನರ ಉದರ ಭಾಗವನ್ನು ಸಂಪರ್ಕಿಸುತ್ತದೆ. ಮಲ ಮೂತ್ರ ವಿಸರ್ಜನೆಯ ಸಮಯದಲ್ಲಿ ಜನಿವಾರವನ್ನು ಬಲಗಿವಿಯ ಮೇಲೆ ಹಾಕಿ ಕೊಂಡಾಗ ಆ ನರದ ಉತ್ತೇಜನವಾಗುತ್ತದೆ. ಇದರಿಂದ ಜೀರ್ಣ ಸಂಬಂಧಿ ಪ್ರಕ್ರಿಯೆಗಳು ಸುಗಮವಾಗಿ ನಡೆಯುತ್ತವೆ. ಎಸಿಡಿಟಿ, ಉದರ ಸಂಬಂಧಿ ರೋಗಗಳು, ಮೂತ್ರೇಂದ್ರಿಯ ರೋಗಗಳು, ರಕ್ತದೊತ್ತಡ, ಹೃದಯ ಸಂಬಂಧಿ ರೋಗಗಳು ಹಾಗೂ ಹಲವು ಸಾಂಕ್ರಾಮಿಕ ರೋಗಗಳಿಂದ ಮುಕ್ತಿ ಸಿಗುತ್ತದೆ.
ಚಿಕಿತ್ಸಾ ವಿಜ್ಞಾನದ ಪ್ರಕಾರ ಬಲಗಿವಿಯ ನರ ಗುಪ್ತೇಂದ್ರಿಯಗಳ ಜೊತೆ ಸಂಪರ್ಕವನ್ನು ಹೊಂದಿದೆ. ಮೂತ್ರ ವಿಸರ್ಜನೆಯ ಸಮಯದಲ್ಲಿ ಯಜ್ಞೋಪವೀತವನ್ನು ಬಲಗಿವಿಯ ಮೇಲೆ ಹಾಕಿ ಕೊಂಡಾಗ ಶುಕ್ರಾಣುಗಳ ರಕ್ಷಣೆಯಾಗುತ್ತದೆ.
ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿಗೆ ಭಯ ಹಾಗೂ ದುಃಸ್ವಪ್ನಗಳ ಸಮಸ್ಯೆ ಕಾಡುವುದಿಲ್ಲ.
ಯಜ್ಞೋಪವೀತವನ್ನು ಧರಿಸುವುದರಿಂದ ದೇಹದಲ್ಲಿರುವ ಸೂರ್ಯ ನಾಡಿ ಜಾಗೃತವಾಗಿರುತ್ತದೆ.
ಯಜ್ಞೋಪವೀತ ವ್ಯಕ್ತಿಯ ಅಂತಃಪ್ರೇರಣೆಯನ್ನು ಜಾಗೃತಗೊಳಿಸಿ ಸನ್ಮಾರ್ಗದಲ್ಲಿ ನಡೆಯುವಂತೇ ಪ್ರೇರೇಪಿಸುತ್ತದೆ. ವ್ಯಕ್ತಿಯನ್ನು ಅನ್ಯಾಯ, ಅನೀತಿ, ಭ್ರಷ್ಟಾಚಾರಗಳಿಂದ ದೂರವಿರಿಸುತ್ತದೆ.
ಹೀಗೆ ಯಜ್ಞೋಪವೀತ ಸಂಸ್ಕಾರ ಎಂಬುದು ಪರಮ ಪವಿತ್ರ ಹಾಗೂ ವೈಜ್ಞಾನಿಕ ಹಿನ್ನೆಲೆಯಿರುವ ಸಂಸ್ಕಾರ. ಯಜ್ಞೋಪವೀತ ಧಾರಣೆ ಪ್ರತಿಯೊಬ್ಬ ಹಿಂದೂವಿನ ಕರ್ತವ್ಯ. ಇದರಿಂದ ವ್ಯಕ್ತಿಯ ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ಸಾಧ್ಯ.