ಕೊಡಗು; ಭಾರಿ ಮಳೆ ಅವಾಂತರದಿಂದಾಗಿ ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂಕಂಪನವುಂಟಾಗಿದ್ದು, ಮಳೆ ಹಾನಿ ಪ್ರದೇಶಗಳಿಗೆ ಕಂದಾಯ ಸಚಿವ ಆರ್.ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಿರಂತರ ಮಳೆಯಿಂದಾಗಿ ಕೊಡಗು ಜಿಲ್ಲೆಯಲ್ಲಿ ಭೂಕುಸಿತ, ಗುಡ್ಡ ಕುಸಿತವುಂಟಾಗುತ್ತಿದ್ದು, ಹಲವೆಡೆ ಭೂಮಿ ಕಂಪಿಸಿದೆ. ಗುಡ್ಡ ಕುಸಿತದಿಂದಾಗಿ ಹಲವೆಡೆ ಮನೆಗಳು ನೆಲಸಮವಾಗಿದ್ದು, ಜನರು ಕಂಗಾಲಾಗಿದ್ದಾರೆ. ಮಳೆಯಿಂದ ಹಾನಿಗೀಡಾದ ಮನೆಗಳಿಗೆ ಭೇಟಿ ನೀಡಿದ ಸಚಿವ ಆರ್.ಅಶೋಕ್, ಶಾಸಕ ಕೆ.ಜಿ.ಬೋಪಯ್ಯ ಕುಟುಂಬದವರಿಗೆ ಧೈರ್ಯ ತುಂಬಿದರು.
ಮನೆ ಸಂಪೂರ್ಣವಾಗಿ ಹಾನಿಯಾದ ಕುಟುಂಬದವರಿಗೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಸ್ವಲ್ಪ ಮಟ್ಟಿಗೆ ಮನೆ ಹಾನಿಯಾಗಿದ್ದರೆ ಅಂತಹ ಕುಟುಂಬಕ್ಕೆ 50 ಸಾವಿರ ಹಾಗೂ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದ್ದರೆ ಅಂತಹ ಮನೆಗಳಿಗೆ 10 ಸಾವಿರ ರೂಪಾಯಿ ಪರಿಹಾರ ನೀಡುವುದಾಗಿ ಸಚಿವರು ತಿಳಿಸಿದ್ದಾರೆ.
ಈ ವೇಳೆ ಮಾತನಾಡಿದ ಸಚಿವರು, ಮಳೆಯಿಂದ ಹಾನಿಯಾದ ಮನೆಗಳಿಗೆ ಪರಿಹಾರ ನೀಡಲಾಗುವುದು. ನೊಂದ ಜನರಿಗೆ ಸಹಾಯ ಮಾಡುವುದು ಸರ್ಕಾರದ ಕರ್ತವ್ಯ. ಇಲ್ಲಿನ ಪರಿಸರಕ್ಕೆ ಪೂರಕವಾಗಿ ಹೋಮ್ ಸ್ಟೇ, ರೆಸಾರ್ಟ್ ಮಾಡುವಂತೆ ಸೂಚಿಸಲಾಗಿದೆ. ಪ್ರಕೃತಿ ವಿರುದ್ಧವಾಗಿ ಯಾರೂ ಹೋಗಬಾರದು. ಹಾಗೆ ಮಾಡಿದಲ್ಲಿ ಅನಾಹುತ ಸಂಭವಿಸಬಹುದು. ಹಾಗಾಗಿ ಕೊಡಗಿನ ಪರಿಸರಕ್ಕನುಗುಣವಾಗಿ ಕಟ್ಟಡಗಳು ನಿರ್ಮಾಣ ಮಾಡಬಹುದು ಎಂದು ಹೇಳಿದರು.