ತೈಲ ಕಂಪನಿಗಳು ಬುಧವಾರದಂದು ಗೃಹ ಬಳಕೆ ಸಿಲಿಂಡರ್ ಬೆಲೆಯನ್ನು 50 ರೂಪಾಯಿಗಳಷ್ಟು ಹೆಚ್ಚಳ ಮಾಡಿದೆ. ಇದರಿಂದಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 14.2 ಕೆಜಿ ತೂಕದ ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆ 1055 ರೂ. ತಲುಪಿದೆ.
ಕಳೆದ ಜನವರಿ ಬಳಿಕ ನಾಲ್ಕನೇ ಬಾರಿ ಬೆಲೆಯನ್ನು ಏರಿಕೆ ಮಾಡಲಾಗಿದ್ದು, ಒಟ್ಟಾರೆ ಒಂದು ವರ್ಷದಲ್ಲಿ 244 ರೂಪಾಯಿಗಳಷ್ಟು ಹೆಚ್ಚಳ ಮಾಡಿದಂತಾಗಿದೆ. ಮಾರ್ಚ್ 22ರಂದು 50 ರೂ., ಮೇ 7ರಂದು 50 ರೂ., ಮೇ 19 ರಂದು 3.50 ರೂ. ಏರಿಕೆ ಮಾಡಲಾಗಿದ್ದು, ಈಗ ಜುಲೈ 6ರಂದು ಮತ್ತೆ 50 ರೂ. ಹೆಚ್ಚಳ ಮಾಡಲಾಗಿದೆ.
2021ರ ಜೂನ್ ಬಳಿಕ ಒಟ್ಟಾರೆ 244 ರೂಪಾಯಿಗಳಷ್ಟು ಏರಿಕೆಯಾಗಿದ್ದು, ಈ ವರ್ಷದ ಮಾರ್ಚ್ ಬಳಿಕ 153.50 ರೂಪಾಯಿ ಏರಿಕೆಯಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಭಾರತೀಯ ತೈಲ ಕಂಪನಿಗಳು ಬೆಲೆ ಏರಿಕೆ ಮಾಡಿವೆ ಎಂದು ಹೇಳಲಾಗಿದೆ.