ನವದೆಹಲಿ: ರಾಜ್ಯಸಭೆ ಸದಸ್ಯರಾಗಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗಡೆ ಅವರನ್ನು ನಾಮನಿರ್ದೇಶನ ಮಾಡಲಾಗಿದೆ.
ಖ್ಯಾತ ಅಥ್ಲೀಟ್ ಪಿ.ಟಿ. ಉಷಾ ಹಾಗೂ ಸಂಗೀತ ನಿರ್ದೇಶಕ ಇಳಯರಾಜ ಮತ್ತು ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ತಂದೆ ಖ್ಯಾತ ಕತೆಗಾರ ಕೆ.ವಿ. ವಿಜಯೇಂದ್ರ ಪ್ರಸಾದ್ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ.
ರಾಜ್ಯಸಭಾ ನಾಮನಿರ್ದೇಶಿತ ಸದಸ್ಯರಾಗಿ PT ಉಷಾ, ಇಳಯರಾಜ, ವೀರೇಂದ್ರ ಹೆಗ್ಗಡೆ, KV ವಿಜಯೇಂದ್ರ ಪ್ರಸಾದ್ ಅವರನ್ನು ಆಯ್ಕೆ ಮಾಡಿದ್ದು, ವಿಭಿನ್ನ ಕ್ಷೇತ್ರಗಳಲ್ಲಿ ಛಾಪು ಮೂಡಿಸಿರುವ ಅತ್ಯುತ್ತಮ ಭಾರತೀಯರನ್ನು ಮೋದಿ ಸರ್ಕಾರ ಗುರುತಿಸುವ ಇನ್ನೊಂದು ಉದಾಹರಣೆಯನ್ನು ತೋರಿಸುತ್ತದೆ ಎಂದು ಹೇಳಲಾಗಿದೆ.
ನಾಲ್ಕು ನಾಮನಿರ್ದೇಶಿತ ಸದಸ್ಯರು ತಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಾಗಿದ್ದಾರೆ. ಅವರ ಕೊಡುಗೆಗಳಿಗಾಗಿ ರಾಷ್ಟ್ರೀಯ ಮತ್ತು ಜಾಗತಿಕ ಮನ್ನಣೆಯನ್ನು ಪಡೆದಿದ್ದಾರೆ. ನಾಲ್ಕು ನಾಮನಿರ್ದೇಶಿತ ಪ್ರತಿನಿಧಿಗಳಲ್ಲಿ ನಾಲ್ವರೂ ದಕ್ಷಿಣ ಭಾರತದ ವಿವಿಧ ರಾಜ್ಯಗಳನ್ನು ಪ್ರತಿನಿಧಿಸುತ್ತಾರೆ.
ನಾಲ್ವರು ನಾಮನಿರ್ದೇಶಿತ ಸದಸ್ಯರಲ್ಲಿ ಒಬ್ಬರು ಮಹಿಳೆ, ಒಬ್ಬರು ದಲಿತರು, ಒಬ್ಬರು ಧಾರ್ಮಿಕ ಅಲ್ಪಸಂಖ್ಯಾತ(ಜೈನ ಸಮುದಾಯ ) ಸದಸ್ಯ ಸೇರಿದ್ದಾರೆ. ಒಬ್ಬರು ಕ್ರೀಡಾಪಟುಗಳನ್ನು ಬೆಳೆಸಿದರೆ, ಇನ್ನೊಬ್ಬರು ಸೃಜನಶೀಲ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಇನ್ನೊಬ್ಬರು ಚಿತ್ರರಂಗದ ಪ್ರತಿಭೆಯನ್ನು ಪೋಷಿಸಿದ್ದಾರೆ ಮತ್ತೊಬ್ಬರು ಏಕತೆಯ ಸೇವೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಇಬ್ಬರು ಪದ್ಮವಿಭೂಷಣ ಪುರಸ್ಕೃತರು ಮತ್ತು ಪದ್ಮಶ್ರೀ ಪುರಸ್ಕೃತರು ಸೇರಿದ್ದಾರೆ.
ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಈ ನಾಲ್ವರಿಗೂ ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ.
ಪಿ.ಟಿ. ಉಷಾ ಅವರು ಪ್ರತಿಯೊಬ್ಬ ಭಾರತೀಯನಿಗೂ ಸ್ಫೂರ್ತಿಯಾಗಿದ್ದಾರೆ. ಕ್ರೀಡೆಯಲ್ಲಿ ಅವರ ಸಾಧನೆಗಳು ಅಪಾರ. ಕಳೆದ ಹಲವಾರು ವರ್ಷಗಳಿಂದ ಉದಯೋನ್ಮುಖ ಕ್ರೀಡಾಪಟುಗಳಿಗೆ ಮಾರ್ಗದರ್ಶನ ನೀಡುವ ಅವರ ಕೆಲಸವು ಅಷ್ಟೇ ಶ್ಲಾಘನೀಯವಾಗಿದೆ. ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ಅವರಿಗೆ ಅಭಿನಂದನೆಗಳು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಸಂಗೀತ ನಿರ್ದೇಶಕ ಇಳಯರಾಜ ಅವರ ಸೃಜನಶೀಲ ಪ್ರತಿಭೆ ತಲೆಮಾರುಗಳಾದ್ಯಂತ ಜನರನ್ನು ಆಕರ್ಷಿಸಿದೆ. ಅವರ ಕೃತಿಗಳು ಅನೇಕ ಭಾವನೆಗಳನ್ನು ಸುಂದರವಾಗಿ ಪ್ರತಿಬಿಂಬಿಸುತ್ತವೆ. ಅವರ ಜೀವನ ಪಯಣ ಅಷ್ಟೇ ಸ್ಪೂರ್ತಿದಾಯಕವಾಗಿದೆ. ಅವರು ವಿನಮ್ರತೆಯಿಂದ ತುಂಬಾ ಸಾಧಿಸಿದ್ದಾರೆ. ಅವರು ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವುದು ಸಂತಸ ತಂದಿದೆ ಎಂದು ಮೋದಿ ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ.
ವೀರೇಂದ್ರ ಹೆಗ್ಗಡೆಯವರು ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಧರ್ಮಸ್ಥಳದ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಮತ್ತು ಆರೋಗ್ಯ, ಶಿಕ್ಷಣ ಮತ್ತು ಸಂಸ್ಕೃತಿಯಲ್ಲಿ ಅವರು ಮಾಡುತ್ತಿರುವ ಮಹತ್ತರವಾದ ಕಾರ್ಯ ಮಾದರಿಯಾಗಿದೆ. ಅವರು ಸಂಸತ್ತಿಗೆ ಆಯ್ಕೆಯಾಗಿರುವುದು ಅಭಿನಂದನಾರ್ಹ ಎಂದು ಮೋದಿ ಹೇಳಿದ್ದಾರೆ.
ವಿ. ವಿಜಯೇಂದ್ರ ಪ್ರಸಾದ್ ಅವರು ದಶಕಗಳಿಂದ ಸೃಜನಶೀಲ ಪ್ರಪಂಚದೊಂದಿಗೆ ಸಂಬಂಧ ಹೊಂದಿದ್ದಾರೆ. ಅವರ ಕೃತಿಗಳು ಭಾರತದ ವೈಭವಯುತ ಸಂಸ್ಕೃತಿಯನ್ನು ಪ್ರದರ್ಶಿಸುತ್ತವೆ ಮತ್ತು ಜಾಗತಿಕವಾಗಿ ಗುರುತಿಸಲ್ಪಟ್ಟಿವೆ. ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ಅವರಿಗೆ ಅಭಿನಂದನೆಗಳು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.