ನವದೆಹಲಿ: ಪ್ರಧಾನಿ ಮೋದಿ ಸಂಪುಟಕ್ಕೆ ಇಬ್ಬರು ಕೇಂದ್ರ ಸಚಿವರಾದ ಮುಖ್ತಾರ್ ಅಬ್ಬಾಸ್ ನಖ್ವಿ, ಆರ್.ಸಿ.ಪಿ. ಸಿಂಗ್ ರಾಜೀನಾಮೆ ನೀಡಿದ್ದಾರೆ
ರಾಜ್ಯಸಭಾ ಸದಸ್ಯತ್ವ ಜುಲೈ 7 ರಂದು ಕೊನೆಗೊಳ್ಳಲಿದ್ದು, ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ರಾಜೀನಾಮೆ ನೀಡಿದ್ದಾರೆ. “ನಾನು ಸಾಂವಿಧಾನಿಕ ಅವಶ್ಯಕತೆಗಳನ್ನು ಅನುಸರಿಸಬೇಕಾಗಿತ್ತು” ಎಂದು ಮೋದಿ ಸರ್ಕಾರದಲ್ಲಿ ಮುಸ್ಲಿಂ ಮುಖವಾಗಿದ್ದ ನಖ್ವಿ ತಿಳಿಸಿದರು.
ರಾಜ್ಯಸಭೆಗೆ ಮರು ನಾಮನಿರ್ದೇಶನ ಪಡೆಯುವಲ್ಲಿ ವಿಫಲರಾದ ಉಕ್ಕು ಸಚಿವ ಆರ್.ಸಿ.ಪಿ. ಸಿಂಗ್ ಕೂಡ ತಮ್ಮ ಸ್ಥಾನ ತೊರೆದಿದ್ದಾರೆ. ಮೇಲ್ಮನೆಯಲ್ಲಿ ಅವರ ಅಧಿಕಾರಾವಧಿಯೂ ಗುರುವಾರ ಕೊನೆಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಎನ್.ಡಿ.ಎ. ಮಿತ್ರಪಕ್ಷವಾದ ಜನತಾ ದಳ(ಯುನೈಟೆಡ್) ನಾಯಕ ಸಿಂಗ್, ಅವರ ಪಕ್ಷದಿಂದ ಮತ್ತೊಂದು ಅವಧಿಗೆ ರಾಜ್ಯಸಭೆಗೆ ಟಿಕೆಟ್ ನಿರಾಕರಿಸಲಾಗಿತ್ತು.
ರಾಜ್ಯಸಭೆಯಲ್ಲಿ ನಖ್ವಿ ಅವರ ಅಧಿಕಾರಾವಧಿ ಕೊನೆಗೊಳ್ಳುತ್ತಿದ್ದಂತೆ, ನರೇಂದ್ರ ಮೋದಿ ಸರ್ಕಾರದಲ್ಲಿ ಬಿಜೆಪಿಗೆ ಮುಸ್ಲಿಂ ಪ್ರಾತಿನಿಧ್ಯವಿಲ್ಲದಂತಾಗಿದೆ.
ನಖ್ವಿ ಅವರ ಭವಿಷ್ಯದ ಬಗ್ಗೆ ಸದ್ಯಕ್ಕೆ ಏನೂ ಹೇಳಲಾಗದ್ದರೂ, ಉಪ ರಾಷ್ಟ್ರಪತಿ ಸ್ಥಾನಕ್ಕೆ ಅವರ ಹೆಸರನ್ನು ಪರಿಗಣಿಸಲಾಗುತ್ತಿದೆ ಎಂಬ ವದಂತಿಗಳು ಹರಡಿವೆ.