ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯ COVID-19 ಮುನ್ನೆಚ್ಚರಿಕೆ ಡೋಸ್ ಗಳ ಅಂತರವನ್ನು 9 ತಿಂಗಳಿಂದ 6 ತಿಂಗಳವರೆಗೆ ಕಡಿಮೆ ಮಾಡಿದೆ.
18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಪ್ರಸ್ತುತ 9 ತಿಂಗಳ ಅಂತರವನ್ನು 6 ತಿಂಗಳಿಗೆ ಇಳಿಕೆ ಮಾಡಲಾಗಿದೆ. ಕೇಂದ್ರ ಆರೋಗ್ಯ ಮಂತ್ರಾಲಯದಿಂದ ಈ ಕುರಿತಾಗಿ ಮಾಹಿತಿ ನೀಡಲಾಗಿದೆ.
ವೈಜ್ಞಾನಿಕ ಪುರಾವೆಗಳ ಅನ್ವಯ ನ್ಯಾಷನಲ್ ಟೆಕ್ನಿಕಲ್ ಅಡ್ವೈಸರಿ ಗ್ರೂಪ್ ಆನ್ ಇಮ್ಯುನೈಸೇಶನ್(NTAGI) ಸ್ಥಾಯಿ ತಾಂತ್ರಿಕ ಉಪ ಸಮಿತಿ(STSC) 2 ಡೋಸ್ ಮತ್ತು ಮುನ್ನೆಚ್ಚರಿಕೆ ಡೋಸ್ ನಡುವಿನ ಅವಧಿಯನ್ನು ಅಸ್ತಿತ್ವದಲ್ಲಿರುವ 9 ತಿಂಗಳುಗಳು ಅಥವಾ 39 ವಾರಗಳಿಂದ 6 ತಿಂಗಳಿಗೆ ಅಥವಾ 26 ವಾರಗಳಿಗೆ ಪರಿಷ್ಕರಿಸಲು ಶಿಫಾರಸು ಮಾಡಿದೆ. ಇದನ್ನು NTAGI 3 ಸಹ ಅನುಮೋದಿಸಿದೆ.
ಆದ್ದರಿಂದ, 18-59 ವರ್ಷಗಳಿಂದ ಎಲ್ಲಾ ಫಲಾನುಭವಿಗಳಿಗೆ ಮುನ್ನೆಚ್ಚರಿಕೆ ಡೋಸ್ ಅನ್ನು 6 ತಿಂಗಳು ಅಥವಾ 26 ವಾರ ಪೂರ್ಣಗೊಳಿಸಿದ ನಂತರ ನೀಡಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಮಂತ್ರಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.