ಹದಿಹರೆಯದ ಹೆಣ್ಣು ಮಕ್ಕಳ ಸ್ವಚ್ಛ ಹಾಗೂ ಸುರಕ್ಷಿತ ಋತುಚಕ್ರ ನಿರ್ವಹಣೆಗಾಗಿ ರಾಜ್ಯ ಸರ್ಕಾರ ‘ಮೈತ್ರಿ ಮುಟ್ಟಿನ ಕಪ್’ ಎಂಬ ಯೋಜನೆಯನ್ನು ಜಾರಿಗೆ ತಂದಿದ್ದು, ಇಂತಹ ಯೋಜನೆಯನ್ನು ಪರಿಚಯಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
2022-23ನೇ ಸಾಲಿನ ಬಜೆಟ್ ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಯೋಜನೆಯನ್ನು ಘೋಷಿಸಿದ್ದು, ಇದರ ಅಡಿ ನೂತನ ಹಾಗೂ ಪರಿಸರ ಸ್ನೇಹಿ ಮುಟ್ಟಿನ ನೈರ್ಮಲ್ಯ ಉತ್ಪನ್ನಗಳನ್ನು ಪರಿಚಯಿಸಲಾಗುತ್ತಿದೆ. ಈ ಯೋಜನೆಗೆ ಇಂದು ಚಾಮರಾಜನಗರ ಜಿಲ್ಲೆಯಲ್ಲಿ ಚಾಲನೆ ನೀಡಲಾಗುತ್ತಿದೆ.
ಈಗಾಗಲೇ ಸರ್ಕಾರದ ವತಿಯಿಂದ ‘ಶುಚಿ’ ಕಾರ್ಯಕ್ರಮ ಯೋಜನೆ ಅಡಿ ಹದಿಹರೆಯದ ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ನ್ಯಾಪ್ ಕಿನ್ ಗಳನ್ನು ಉಚಿತವಾಗಿ ವಿತರಿಸಲಾಗುತ್ತಿದ್ದು, ಇದೀಗ ನೂತನ ಹಾಗೂ ಪರಿಸರ ಸ್ನೇಹ ಮುಟ್ಟಿನ ನೈರ್ಮಲ್ಯ ಉತ್ಪನ್ನಗಳನ್ನು ಒದಗಿಸಲಾಗುತ್ತದೆ.
‘ಮೈತ್ರಿ ಮುಟ್ಟಿನ ಕಪ್’ ಯೋಜನೆಯು ಪ್ರಾಯೋಗಿಕವಾಗಿ ಚಾಮರಾಜನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಆರಂಭಿಸಲಾಗುತ್ತಿದ್ದು, ಇದರ ಫಲಿತಾಂಶವನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ಇತರೆ ಜಿಲ್ಲೆಗಳಿಗೂ ಸಹ ವಿಸ್ತರಿಸಲಾಗುತ್ತದೆ.
ಆರಂಭಿಕ ಹಂತದಲ್ಲಿ 10000 ಫಲಾನುಭವಿಗಳನ್ನು ಈ ಯೋಜನೆ ಒಳಗೊಂಡಿದ್ದು, ಎಲ್ಲ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳ ನೋಂದಾಯಿತ 16 ರಿಂದ 18 ವರ್ಷ ವಯಸ್ಸಿನ ಹೆಣ್ಣು ಮಕ್ಕಳು ಫಲಾನುಭವಿಗಳಾಗಿದ್ದಾರೆ.
‘ಮೈತ್ರಿ ಋತುಸ್ರಾವ ಕಪ್’ ಯೋಜನೆ ಕುರಿತು ವಿವರ: 16 ರಿಂದ 18 ವರ್ಷದೊಳಗಿನ ಹೆಣ್ಣು ಮಕ್ಕಳಿಗಾಗಿ ಚಾಲ್ತಿಯಲ್ಲಿರುವ ಶುಚಿ ಕಾರ್ಯಕ್ರಮದಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ಪ್ಯಾಡ್ ಗಳ ಜೊತೆಗೆ ಮತ್ತು ಅದರ ಪರ್ಯಾಯ ಹಾಗೂ ಪ್ರಾಯೋಗಿಕವಾಗಿ ಮೈತ್ರಿ ಮುಟ್ಟಿನ ಕಪ್ ಗಳನ್ನು ಪೂರೈಸಲಾಗುತ್ತದೆ.
ಮುಟ್ಟಿನ ಕಪ್ ಗಳನ್ನು ಅಧಿಕ ಸಮಯದವರೆಗೆ (8 ಗಂಟೆಗಳ ಅವಧಿ) ಬಳಸಬಹುದು ಮತ್ತು ಸೂಕ್ತ ನಿರ್ವಹಣೆಯೊಂದಿಗೆ ಕನಿಷ್ಠ 8 – 10 ವರ್ಷಗಳವರೆಗೆ ಸಮರ್ಥನೀಯವಾಗಿ ಮರುಬಳಕೆ ಮಾಡಬಹುದು
ಮೈತ್ರಿ ಮುಟ್ಟಿನ ಕಪ್ ಗಳು ಪರಿಸರ ಸ್ನೇಹಿಯಾಗಿದ್ದು ಮರುಬಳಕೆ ಮಾಡಬಹುದಾಗಿರುವುದರಿಂದ ವಿಲೇವಾರಿಯ ಸಮಸ್ಯೆ ಇರುವುದಿಲ್ಲ.