ಅಗ್ನಿಪಥ್ ಯೋಜನೆ ಮೂಲಕ ಭಾರತೀಯ ಸೇನಾಪಡೆಯಲ್ಲಿ ಅಗ್ನಿವೀರರನ್ನು ನೇಮಕಾತಿ ಮಾಡಿಕೊಳ್ಳಲು ಈಗಾಗಲೇ ತೀರ್ಮಾನಿಸಲಾಗಿದೆ. ಇದಕ್ಕೆ ಪೂರಕವಾಗಿ ಸೇನಾ ಪಡೆ, ವಾಯುಪಡೆ ಹಾಗೂ ನೌಕಾಪಡೆಯಲ್ಲಿ ನೇಮಕಾತಿ ಪ್ರಕ್ರಿಯೆಗಳು ಆರಂಭವಾಗಿವೆ. ಲಕ್ಷಾಂತರ ಸಂಖ್ಯೆಯಲ್ಲಿ ಯುವ ಜನತೆ ಅಗ್ನಿವೀರರಾಗಲು ತಮ್ಮ ಅರ್ಜಿ ಸಲ್ಲಿಸಿದ್ದಾರೆ.
ಇದರ ಮಧ್ಯೆ ಅಗ್ನಿಪಥ್ ಯೋಜನೆ ಘೋಷಿಸಿದ ವೇಳೆ ರಾಜಸ್ಥಾನ ಬಿಹಾರ, ಜಾರ್ಖಂಡ್ಗಳಲ್ಲಿ ಪ್ರತಿಭಟನೆ ನಡೆಸಿದ್ದ ಯುವಕರು ಸರ್ಕಾರಿ ಆಸ್ತಿಪಾಸ್ತಿಗೆ ಅಪಾರ ಹಾನಿ ಮಾಡಿದ್ದರು. ರೈಲುಗಳಿಗೆ ಬೆಂಕಿ ಹಚ್ಚಿದ ಘಟನೆಯೂ ನಡೆದಿದ್ದು ನೂರಾರು ಕೋಟಿ ರೂಪಾಯಿಗಳ ನಷ್ಟ ಸಂಭವಿಸಿತ್ತು.
ಇದೀಗ ಅಗ್ನಿಪಥ್ ಯೋಜನೆ ಕುರಿತಂತೆ ಲೆಫ್ಟಿನೆಂಟ್ ಜನರಲ್ ರಾಣಾ ಪ್ರತಾಪ್ ಮಹತ್ವದ ಹೇಳಿಕೆ ನೀಡಿದ್ದಾರೆ. ‘ಇಂಡಿಯಾ ಟುಡೇ ಕಾನ್ಕ್ಲೇವ್ ಈಸ್ಟ್ 2022’ ದಿಲ್ಲಿ ಮಾತನಾಡಿದ ಅವರು 2030 ರ ವೇಳೆಗೆ ಭಾರತೀಯ ಸೇನೆಯಲ್ಲಿ ಶೇಕಡಾ 50ರಷ್ಟು ಅಗ್ನಿವೀರರು ಇರಲಿದ್ದಾರೆ ಎಂದು ತಿಳಿಸಿದ್ದಾರೆ.
‘ಅಗ್ನಿಪಥ್’ ಯೋಜನೆಯನ್ನು ಘೋಷಿಸುವ ಮುನ್ನ ಇದರ ಸಾಧಕ ಬಾಧಕಗಳನ್ನು ಅಮೂಲಾಗ್ರವಾಗಿ ಪರಿಶೀಲಿಸಲಾಗಿತ್ತು. ಎಲ್ಲ ಚರ್ಚೆಗಳನ್ನು ನಡೆಸಿದ ಬಳಿಕ ಯೋಜನೆ ಯುವ ಜನತೆಗೆ ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ಅಂತಿಮವಾಗಿ ಇದಕ್ಕೆ ಅನುಮೋದನೆ ನೀಡಲಾಯಿತು ಎಂದು ಹೇಳಿದ್ದಾರೆ.
ಇನ್ನು ಯೋಜನೆ ವಿರುದ್ಧ ನಡೆದ ಹಿಂಸಾತ್ಮಕ ಪ್ರತಿಭಟನೆ ಕುರಿತು ಮಾತನಾಡಿದ ಲೆಫ್ಟಿನೆಂಟ್ ಜನರಲ್ ರಾಣಾ ಪ್ರತಾಪ್, ತಪ್ಪು ಗ್ರಹಿಕೆಯಿಂದ ಇದು ಆಗಿದ್ದು, ಯುವ ಜನತೆಗೆ ಯೋಜನೆ ಕುರಿತು ಸವಿವರವಾಗಿ ತಿಳಿದುಕೊಳ್ಳಬೇಕಾಗಿತ್ತು ಎಂದು ಹೇಳಿದ್ದಾರೆ.