ಬ್ರಿಟನ್ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಾಕ್ ಹಾಗೂ ಆರೋಗ್ಯ ಸಚಿವ ಸಜ್ಜಿದ್ ಜಾವೇದ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದು ಇದರಿಂದಾಗಿ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಸರ್ಕಾರ ಈಗ ಸಂಕಷ್ಟಕ್ಕೆ ಸಿಲುಕಿದೆ.
ಪ್ರಧಾನಿ ಬೋರಿಸ್ ಜಾನ್ಸನ್ ಅವರ ಕಾರ್ಯ ವೈಖರಿಯಿಂದ ಬೇಸತ್ತು ಇವರುಗಳು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದ್ದು, ರಾಜೀನಾಮೆ ವಿಷಯವನ್ನು ಸಾಮಾಜಿಕ ಜಾಲತಾಣ ಟ್ವಿಟರ್ ಮೂಲಕ ಬಹಿರಂಗಪಡಿಸಿದ್ದಾರೆ.
ಕೆಲವೊಂದು ವಿಷಯಗಳಲ್ಲಿ ಬೋರಿಸ್ ಜಾನ್ಸನ್ ಅವರು ತೆಗೆದುಕೊಂಡ ಆಡಳಿತಾತ್ಮಕ ನಿರ್ಧಾರಗಳು ಉಭಯ ಸಚಿವರುಗಳಿಗೆ ಬೇಸರ ತರಿಸಿದ್ದವು ಎನ್ನಲಾಗಿದ್ದು, ಸಾರ್ವಜನಿಕರು ಸರ್ಕಾರದ ಮೇಲಿಟ್ಟಿರುವ ನಿರೀಕ್ಷೆಗಳನ್ನು ಪೂರೈಸಲಾಗುತ್ತಿಲ್ಲ ಎಂಬ ಅಭಿಪ್ರಾಯವನ್ನು ಹೊಂದಿದ್ದರೆಂದು ಹೇಳಲಾಗಿದೆ.