ಅಸ್ಸಾಂನ ಕ್ಯಾಚಾರ್ ಜಿಲ್ಲೆಯಲ್ಲಿ ಬರಾಕ್ ನದಿಯ ಒಡ್ಡು ಒಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ, ಒಡ್ಡು ಒಡೆದ ಪರಿಣಾಮ ಸಿಲ್ಚಾರ್ ನಗರದಲ್ಲಿ ಭಾರಿ ಪ್ರವಾಹಕ್ಕೆ ಕಾರಣವಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಂಧಿತರನ್ನು ಮಿಥು ಹುಸೇನ್ ಲಸ್ಕರ್ ಮತ್ತು ಕಾಬೂಲ್ ಖಾನ್ ಎಂದು ಗುರುತಿಸಲಾಗಿದೆ. ಕ್ಯಾಚಾರ್ ಪೊಲೀಸ್ ವರಿಷ್ಠಾಧಿಕಾರಿ ರಮಣದೀಪ್ ಕೌರ್ ಇಬ್ಬರ ಬಂಧನವನ್ನು ಖಚಿತಪಡಿಸಿದ್ದಾರೆ. ಆದರೆ, ಘಟನೆಯಲ್ಲಿ ಇಬ್ಬರ ಪಾತ್ರದ ಬಗ್ಗೆ ವಿವರಗಳನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಲಸ್ಕರ್ ನನ್ನು ಶನಿವಾರ, ಖಾನ್ನನ್ನು ಶುಕ್ರವಾರ ರಾತ್ರಿ ಬಂಧಿಸಲಾಗಿದೆ.
ಈ ಹಿಂದೆಯೇ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರು, ಪ್ರವಾಹವು ಮಾನವ ನಿರ್ಮಿತ ದುರಂತವಾಗಿದ್ದು, ದುಷ್ಕರ್ಮಿಗಳು ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದರು.
ಮುಖ್ಯಮಂತ್ರಿ ಕ್ಯಾಚಾರ್ ಜಿಲ್ಲೆಯ ಒಡ್ಡು ಒಡೆದ ಸ್ಥಳಕ್ಕೆ ಭೇಟಿ ನೀಡಿದಾಗ, ಸ್ಥಳೀಯ ನಿವಾಸಿಗಳಿಗೆ ವಿಡಿಯೋದಲ್ಲಿರುವ ಧ್ವನಿಗಳನ್ನು ಗುರುತಿಸುವಂತೆ ಜನರನ್ನು ಕೇಳಿದ್ದು, ತರುವಾಯ, ಖಾನ್ ಅವರನ್ನು ಗುರುತಿಸಲಾಯಿತು. ಕಟ್ಟೆ ಒಡೆದಿದ್ದಕ್ಕೆ ಪ್ರಮುಖವಾಗಿ ಆರು ಮಂದಿ ಕಾರಣ ಎಂದು ತಿಳಿದು ಬಂದಿದೆ.
ಗುವಾಹಟಿಯಲ್ಲಿ ಸಿಐಡಿಯಿಂದಲೂ ಪ್ರಕರಣ ದಾಖಲಿಸಲಾಗಿದೆ. ಸಿಐಡಿಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಪ್ರಕರಣದ ತನಿಖೆಯ ನೇತೃತ್ವ ವಹಿಸುತ್ತಾರೆ. ವಿಶೇಷ ಕಾರ್ಯಪಡೆ ತನಿಖೆಯ ಮೇಲ್ವಿಚಾರಣೆ ಮಾಡಲಿದೆ.
ಮೇ 24 ರಂದು, ಸಿಲ್ಚಾರ್ ನಿಂದ ಸುಮಾರು 3 ಕಿಮೀ ದೂರದಲ್ಲಿರುವ ಬೇತುಕಂಡಿಯಲ್ಲಿ ಸಂಗ್ರಹವಾದ ನೀರನ್ನು ಬರಾಕ್ ನದಿಗೆ ಹರಿಸಲು ಒಡ್ಡು ಒಡೆದು ಹಾಕಿದ ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಪೊಲೀಸ್ ದೂರು ದಾಖಲಿಸಲಾಗಿದೆ.
ನಂತರ ಜೂನ್ ನಲ್ಲಿ ಭಾರೀ ಮಳೆಯ ನಂತರ ನದಿ ನೀರು ಸಿಲ್ಚಾರ್ ನಗರಕ್ಕೆ ನುಗ್ಗಿ ಪ್ರವಾಹ ಪರಿಸ್ಥಿತಿ ಉಂಟಾಗಿ 1 ಲಕ್ಷಕ್ಕೂ ಹೆಚ್ಚು ಜನರು ತೊಂದರೆ ಅನುಭವಿಸುವಂತಾಯಿತು.