ಬೆಂಗಳೂರು: ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ಜಮೀರ್ ನಿವಾಸದ ಬಳಿ ಹೈಡ್ರಾಮಾ ನಡೆದಿದ್ದು, ಅಭಿಮಾನಿಗಳು ಪ್ರತಿಭಟನೆ ತೀವ್ರಗೊಳಿಸಿದ್ದಾರೆ.
ಬೆಂಗಳೂರಿನ ಕಂಟೋನ್ಮೆಂಟ್ ನಲ್ಲಿರುವ ಜಮೀರ್ ಅಹ್ಮದ್ ನಿವಾಸ, ಸಿಲ್ವರ್ ಓಕ್ ಅಪಾರ್ಟ್ ಮೆಂಟ್ ನಲ್ಲಿರುವ ಫ್ಲಾಟ್, ಸದಾಶಿವನಗರದಲ್ಲಿರುವ ಗೆಸ್ಟ್ ಹೌಸ್, ಬನಶಂಕರಿಯಲ್ಲಿರುವ ಜಿ.ಕೆ ಅಸೋಸಿಯೇಟ್ಸ್ ಕಚೇರಿ, ಕಲಾಸಿಪಾಳ್ಯದಲ್ಲಿರುವ ನ್ಯಾಷನಲ್ ಟ್ರಾವೆಲ್ಸ್ ಕಚೇರಿ ಮೇಲೆ 5 ವಾಹನಗಳಲ್ಲಿ ಬಂದ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಎಸಿಬಿ ದಾಳಿ ಬಗ್ಗೆ ಸುದ್ದಿ ಪ್ರಸಾರವಾಗುತ್ತಿದ್ದಂತೆ ಜಮೀರ್ ನಿವಾಸದತ್ತ ಧಾವಿಸಿರುವ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಮಧ್ಯಪ್ರವೇಶ ಮಾಡಿದ ಎಸಿಬಿ ಅಧಿಕಾರಿಗಳು ಹಾಗೂ ಪೊಲೀಸರು ಪ್ರತಿಭಟನೆ ಮಾಡಬೇಕು ಎನ್ನುವುದಾದರೆ ಫ್ರೀಡಂ ಪಾರ್ಕ್ ಗೆ ಹೋಗಿ ಪ್ರತಿಭಟನೆ ಮಾಡಿ ಎಂದು ಹೇಳಿದ್ದಾರೆ.
ಈ ವೇಳೆ ಪ್ರತಿಭಟನಾಕಾರರು ಜಮೀರ್ ಅಹ್ಮದ್ ಹಿಂದೂ, ಮುಸ್ಲಿಂ ಎಂದು ನೋಡದೇ ಎಲ್ಲಾ ಸಮುದಾಯಗಳಿಗೂ ಸಹಾಯ ಮಾಡಿದ್ದಾರೆ. ಉದ್ದೇಶ ಪೂರ್ವಕವಾಗಿ ಬಿಜೆಪಿ ನಾಯಕರು ಪದೇ ಪದೇ ಜಮೀರ್ ಅಹ್ಮದ್ ಅವರನ್ನು ಟಾರ್ಗೆಟ್ ಮಾಡಿ ಇಂತಹ ದಾಳಿ ನಡೆಸುತ್ತಿದ್ದಾರೆ. ಸರ್ಕಾರದ ಧೋರಣೆ ಖಂಡನೀಯ ಎಂದು ಕಿಡಿಕಾರಿದ್ದಾರೆ.