ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯ ಪಠ್ಯಪುಸ್ತಕ ಪರಿಷ್ಕರಣೆಗೆ ಭಾರಿ ವಿರೋಧ ವ್ಯಕ್ತವಾಗಿದ್ದು, ಅದನ್ನು ಹಿಂಪಡೆದು ಈ ಹಿಂದಿನ ಬರಗೂರು ರಾಮಚಂದ್ರಪ್ಪ ಸಮಿತಿಯ ಪಠ್ಯಪುಸ್ತಕಗಳನ್ನೇ ಮುಂದುವರಿಸಬೇಕೆಂದು ಒತ್ತಾಯಿಸಿ ಹೋರಾಟ ಕೂಡ ನಡೆಸಲಾಗಿತ್ತು.
ಮಾಜಿ ಪ್ರಧಾನಿ ದೇವೇಗೌಡರು ಸಹ ಈ ಹೋರಾಟದಲ್ಲಿ ಪಾಲ್ಗೊಂಡಿದ್ದಲ್ಲದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಈ ಕುರಿತು ಪತ್ರ ಬರೆದು ರೋಹಿತ್ ಚಕ್ರವರ್ತಿ ನೇತೃತ್ವದ ಪಠ್ಯ ಪರಿಷ್ಕರಣೆಯನ್ನು ಹಿಂಪಡೆದು ಈ ಹಿಂದಿನ ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಪಠ್ಯಗಳನ್ನೇ ಮುಂದುವರೆಸಬೇಕೆಂದು ಒತ್ತಾಯಿಸಿದ್ದರು.
ಆದರೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಪರಿಷ್ಕೃತ ಪಠ್ಯವನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದರು. ಇದನ್ನು ಈಗ ಮತ್ತೆ ಪುನರುಚ್ಚರಿಸಿರುವ ಅವರು ಪರಿಷ್ಕೃತ ಪಠ್ಯಪುಸ್ತಕಗಳು ಶೇ.92 ರಷ್ಟು ಮುದ್ರಣವಾಗಿದ್ದು, ಹೀಗಾಗಿ ಮರು ಮುದ್ರಣ ಮಾಡುವುದಿಲ್ಲ ಎಂದಿದ್ದಾರೆ.
ಕಲಬುರ್ಗಿಯಲ್ಲಿ ಮಾತನಾಡಿರುವ ಅವರು, ತಪ್ಪುಗಳನ್ನು ತಿದ್ದುಪಡಿ ಮಾಡಿರುವ ಹೆಚ್ಚುವರಿ ಬುಕ್ ಲೆಟ್ ಪರಿಷ್ಕೃತ ಪಠ್ಯಪುಸ್ತಕದ ಜೊತೆ ವಿತರಿಸಲಾಗುತ್ತದೆ. ಈ ಹಿಂದೆ ಬರಗೂರು ರಾಮಚಂದ್ರಪ್ಪ ಸಮಿತಿ ಪಠ್ಯ ಪರಿಷ್ಕರಣೆ ವೇಳೆಯೂ ಹಲವು ತಪ್ಪುಗಳಾಗಿದ್ದು ಆಗ 160 ಪುಟದ ಹೆಚ್ಚುವರಿ ಬುಕ್ ಲೆಟ್ ವಿತರಿಸಲಾಗಿತ್ತು. ಅದೇ ರೀತಿ ಈ ಬಾರಿಯೂ ತಪ್ಪುಗಳನ್ನು ತಿದ್ದುಪಡಿ ಮಾಡಿರುವ 17 ಪುಟದ ಬುಕ್ ಲೆಟ್ ವಿತರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.