ಗ್ರ್ಯಾಮಿ ಪ್ರಶಸ್ತಿ ವಿಜೇತ ಗಾಯಕಿ-ಗೀತರಚನೆಕಾರ್ತಿ ಅಡೆಲೆ ಅವರು ಸಂಕಷ್ಟದಲ್ಲಿರುವ ಅಭಿಮಾನಿಗಳಿಗೆ ಸಹಾಯ ಮಾಡುವುದಕ್ಕಾಗಿ ಕೆಲಕಾಲ ತನ್ನ ಸಂಗೀತ ಕಚೇರಿಯನ್ನು ನಿಲ್ಲಿಸಿದ ವಿಡಿಯೋ ವೈರಲ್ ಆಗಿವೆ. ಇದು ಪ್ರಪಂಚದಾದ್ಯಂತ ಜನರ ಹೃದಯ ಗೆದ್ದಿದೆ.
ಜೂನ್ 1 ರಂದು, ಅಡೆಲೆ ಲಂಡನ್ನಲ್ಲಿ ಬಿಎಸ್ಟಿ ಹೈಡ್ ಪಾರ್ಕ್ ಫೆಸ್ಟಿವಲ್ ಸಮಯದಲ್ಲಿ ನೆರೆದಿದ್ದ 65,000 ಜನಸಮೂಹಕ್ಕೆ ಪ್ರದರ್ಶನ ನೀಡುತ್ತಿದ್ದರು. ಈ ವೇಳೆ ಕಿಕ್ಕಿರಿದ ಸ್ಥಳದಲ್ಲಿ ಉಸಿರುಗಟ್ಟುವಿಕೆ ಅಥವಾ ತೊಂದರೆಗೊಳಗಾದ ಅಭಿಮಾನಿಗಳಿಗೆ ಸಹಾಯ ಮಾಡಲು ಅವರು ತಮ್ಮ ಸಂಗೀತ ಕಚೇರಿಯನ್ನು ಕೆಲಕಾಲ ಸ್ಥಗಿತಗೊಳಿಸಿದ್ರು.
34 ವರ್ಷ ವಯಸ್ಸಿನ ಬ್ರಿಟಿಷ್ ಕಲಾವಿದೆ ‘ಸ್ಕೈಫಾಲ್’ ಹಾಡುತ್ತಿದ್ದ ವೇಳೆ ಏಕಾಏಕಿ ತಮ್ಮ ಹಾಡನ್ನು ನಿಲ್ಲಿಸಿದ್ದಾರೆ. ಅಡೆಲೆ ಜನಸಂದಣಿಯ ಹತ್ತಿರ ನಡೆದು ಭದ್ರತೆಯನ್ನು ಕೇಳಿದ್ದಾರೆ. ಸಂಕಷ್ಟದಲ್ಲಿರುವ ಅಭಿಮಾನಿಗೆ ನಿಮಗೆ ಭದ್ರತೆಯ ಸಹಾಯ ಬೇಕೇ..? ಎಂದು ಕೇಳಿದ್ದಾರೆ. ಬಳಿಕ ಪ್ರೇಕ್ಷಕರ ಹರ್ಷೋದ್ಗಾರಗಳ ನಡುವೆ ಅವರು ಶೀಘ್ರದಲ್ಲೇ ಸಂಗೀತ ಕಚೇರಿಯನ್ನು ಪುನರಾರಂಭಿಸಿದರು.
ಈ ವಿಡಿಯೋವನ್ನು ಟ್ವಿಟ್ಟರ್ ಬಳಕೆದಾರರು ಹಂಚಿಕೊಂಡಿದ್ದಾರೆ. ಯಾರೋ ತೊಂದರೆಯಲ್ಲಿದ್ದಾರೆ ಮತ್ತು ಭದ್ರತೆಯ ಸಹಾಯದ ಅಗತ್ಯವಿದೆ ಎಂದು ಭಾವಿಸಿದಾಗ ಪ್ರದರ್ಶನವನ್ನು ನಿಲ್ಲಿಸಿರುವುದು ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
ಕಳೆದ ವರ್ಷ ನವೆಂಬರ್ನಲ್ಲಿ ರಾಪ್ ಸ್ಟಾರ್ ಟ್ರಾವಿಸ್ ಸ್ಕಾಟ್ ಅವರ ಆಸ್ಟ್ರೋವರ್ಲ್ಡ್ ಸಂಗೀತ ಉತ್ಸವದ ಸಂದರ್ಭದಲ್ಲಿ ನಡೆದ ಮಾರಣಾಂತಿಕ ಕಾಲ್ತುಳಿತದಲ್ಲಿ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದು, ನೂರಾರು ಜನರು ಗಾಯಗೊಂಡಿದ್ದರು.