ಬೆಂಗಳೂರು: ಹಾವಿನ ವಿಷ ಹಾಗೂ ಮತ್ತಿತರ ಜಂತುಗಳ ವಿಷಗಳಿಗೆ ಪ್ರತಿವಿಷ ಉತ್ಪಾದಿಸಲು ನೆರವಾಗುವ `ಪ್ರತಿವಿಷ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ `ಬೆಂಗಳೂರು ಹೆಲಿಕ್ಸ್ ಬಯೋಟೆಕ್ ಪಾರ್ಕ್’ನ ಐಬಿಎಬಿ ಸಂಸ್ಥೆಯಲ್ಲಿ ಶಂಕುಸ್ಥಾಪನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಒಟ್ಟು 7 ಕೋಟಿ ರೂಪಾಯಿ ವೆಚ್ಚದಲ್ಲಿ ಮುಂದಿನ ಐದು ವರ್ಷಗಳಲ್ಲಿ ಅಸ್ತಿತ್ವಕ್ಕೆ ಬರಲಿರುವ ಈ ಕೇಂದ್ರವು ದೇಶದಲ್ಲಿ ಪ್ರಮುಖವಾಗಿ ಹಾವಿನ ಕಡಿತದಿಂದ ಸಂಭವಿಸುತ್ತಿರುವ ರೈತರ ಸಾವಿನ ಪ್ರಮಾಣವನ್ನು ತಗ್ಗಿಸಲು ನೆರವಾಗಲಿದೆ ಎಂದರು.
ದೇಶದಲ್ಲಿ ಪ್ರತೀವರ್ಷ ಸರಾಸರಿ 58 ಸಾವಿರ ಸಾವು ಹಾವುಗಳ ಕಡಿತದಿಂದ ಸಂಭವಿಸುತ್ತಿದ್ದು, 1.37 ಲಕ್ಷದಷ್ಟು ಮಂದಿ ಅಂಗವೈಕಲ್ಯಕ್ಕೆ ಒಳಗಾಗುತ್ತಿರುವುದು ಆತಂಕದ ಸಂಗತಿಯಾಗಿದೆ. ಈ ಕೇಂದ್ರವು ಅತ್ಯಾಧುನಿಕ ವೈಜ್ಞಾನಿಕ ತಂತ್ರಜ್ಞಾನಗಳ ಮೂಲಕ ಪ್ರತಿವಿಷ ಥೆರಪಿಗಳನ್ನು ಅಭಿವೃದ್ಧಿ ಪಡಿಸಲಿದೆ. ಜತೆಗೆ, ಹಾವು ಕಡಿತಕ್ಕೆ ಇರುವ ಸಾಂಪ್ರದಾಯಿಕ ಚಿಕಿತ್ಸೆಗಳ ಪರಿಣಾಮಕಾರತೆಯನ್ನೂ ಸುಧಾರಿಸಲಿದೆ ಎಂದು ಅವರು ವಿವರಿಸಿದರು.
16 ಸಾವಿರ ಚದರಡಿ ವಿಸ್ತೀರ್ಣದಲ್ಲಿ ಈ ಕೇಂದ್ರವು ಕಾರ್ಯಾರಂಭ ಮಾಡಲಿದೆ. ಇಲ್ಲಿನ ಸರ್ಪಾಗಾರದಲ್ಲಿ 23 ಪ್ರಭೇದಗಳಿಗೆ ಸೇರಿದ 500ಕ್ಕೂ ಹೆಚ್ಚು ಬಗೆಯ ವಿಷಯುಕ್ತ ಜಂತುಗಳನ್ನು ಅಧ್ಯಯನದ ಸಲುವಾಗಿ ಇಡಲಾಗುವುದು. ಜತೆಗೆ, ಭಾರತೀಯ ಉಪಖಂಡದಲ್ಲಿರುವ ವಿಷಪೂರಿತ ಚೇಳುಗಳು ಮತ್ತು ಜೇಡರ ಹುಳುಗಳು ಕೂಡ ಇಲ್ಲಿನ ಸರ್ಪಾಗಾರದಲ್ಲಿ ಇರಲಿವೆ. ಪ್ರತಿವಿಷ ಚಿಕಿತ್ಸೆಯಲ್ಲಿ ಸಂಶೋಧನೆ ನಡೆಸುವ ಆಸಕ್ತಿ ಇರುವ ನವೋದ್ಯಮಗಳಿಗೆ ಇಲ್ಲಿನ ಇನ್ಕ್ಯುಬೇಷನ್ ಕೇಂದ್ರದಿಂದ (ಪರಿಪೋಷಣಾ ಕೇಂದ್ರ) ಪ್ರೋತ್ಸಾಹ ಒದಗಿಸಲಾಗುವುದು ಎಂದು ತಿಳಿಸಿದರು.