ಬೆಂಗಳೂರು: ಬೇಡಿಕೆಗೆ ತಕ್ಕಂತೆ ಮೊಟ್ಟೆ ಪೂರೈಕೆಯಾಗದ ಕಾರಣ ಮತ್ತು ಉತ್ಪಾದನಾ ವೆಚ್ಚ ಬಲು ದುಬಾರಿಯಾದ ಹಿನ್ನೆಲೆಯಲ್ಲಿ ಮೊಟ್ಟೆ ದರ ಭಾರಿ ಏರಿಕೆ ಕಂಡಿದೆ.
ಮೊಟ್ಟೆ ಚಿಲ್ಲರೆ ಮಾರಾಟ ದರ 6 ರೂಪಾಯಿಯಿಂದ 6.5 ರೂ. ವರೆಗೆ ಏರಿಕೆಯಾಗಿದೆ. ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದ ಮೊಟ್ಟೆ ದರ ಹೆಚ್ಚಳವಾಗಿದ್ದು, ಮೊಟ್ಟೆ ಪ್ರಿಯರಿಗೆ ಶಾಕ್ ನೀಡಿದೆ. ಮೆಕ್ಕೆಜೋಳ, ಸೂರ್ಯಕಾಂತಿ ಹಿಂಡಿ, ಸೋಯಾಬಿನ್ ಮೊದಲಾದ ಕಚ್ಚಾ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿದೆ. ಕೋಳಿ ಆಹಾರ ಪದಾರ್ಥಗಳ ಬೆಲೆ ಶೇಕಡ 10 ರಿಂದ 15 ರಷ್ಟು ಏರಿಕೆ ಆಗಿರುವುದರಿಂದ ಉತ್ಪಾದನಾ ವೆಚ್ಚ ಒಂದು ಮೊಟ್ಟೆಗೆ 5 ರೂಪಾಯಿವರೆಗೆ ತಗುಲುತ್ತದೆ.
ಇನ್ನು ಶೀತದ ವಾತಾವರಣದಲ್ಲಿ ಮೊಟ್ಟೆ ಉತ್ಪಾದನೆ ಕುಂಠಿತವಾಗುತ್ತದೆ. ತಿನ್ನುವವರ ಸಂಖ್ಯೆ ಹಾಗೆಯೇ ಇದೆ. ಹೀಗಾಗಿ ಬೇಡಿಕೆಗೆ ತಕ್ಕಂತೆ ಮೊಟ್ಟೆ ಪೂರೈಕೆ ಆಗುತ್ತಿಲ್ಲ. ರಾಜ್ಯದಲ್ಲಿ ಪ್ರತಿ ದಿನ 1.70 ಕೋಟಿ ಮೊಟ್ಟೆ ಉತ್ಪಾದನೆಯಾಗುತ್ತದೆ. ಈಗ ಉತ್ಪಾದನೆ ಕಡಿಮೆಯಾಗಿದೆ. ಹೊರಗಿನಿಂದಲೂ ಮೊಟ್ಟೆ ತರಿಸಲಾಗುತ್ತದೆ. ಆದರೆ, ಬೇರೆ ರಾಜ್ಯಗಳಿಗೆ ಕರ್ನಾಟಕದಿಂದ ಮೊಟ್ಟೆ ರವಾನೆ ಆಗುತ್ತದೆ. ಇವೇ ಮೊದಲಾದ ಕಾರಣಗಳಿಂದ ಮೊಟ್ಟೆ ದರ ಏರಿಕೆಯಾಗಿದೆ ಎನ್ನಲಾಗಿದೆ.