ನವದೆಹಲಿ: ರಾಷ್ಟ್ರಪತಿ ಹುದ್ದೆಗೆ ದ್ರೌಪದಿ ಮುರ್ಮು ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ ಬಿಜೆಪಿ ನೇತೃತ್ವದ ಎನ್.ಡಿ.ಎ. ಉಪ ರಾಷ್ಟ್ರಪತಿ ಹುದ್ದೆಗೂ ಅಚ್ಚರಿ ಅಭ್ಯರ್ಥಿ ಆಯ್ಕೆ ಮಾಡಲು ಪ್ರಕ್ರಿಯೆ ನಡೆಸಿದೆ.
ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರನ್ನು ಉಪರಾಷ್ಟ್ರಪತಿ ಚುನಾವಣೆಗೆ ಎನ್.ಡಿ.ಎ. ಅಭ್ಯರ್ಥಿಯಾಗಿ ಹೆಸರಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಅಮರೀಂದರ್ ಸಿಂಗ್ ಕಳೆದ ವರ್ಷ ತನಗೆ ಅವಮಾನವಾಗಿದೆ ಎಂದು ಹೇಳಿಕೊಂಡು ಕಾಂಗ್ರೆಸ್ ಪಕ್ಷ ತೊರೆದು ತಮ್ಮದೇ ಆದ ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷವನ್ನು ಸ್ಥಾಪಿಸಿದ್ದರು. ಅವರು 2022 ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಸುಖದೇವ್ ಸಿಂಗ್ ಧಿಂಡ್ಸಾ ನೇತೃತ್ವದ ಶಿರೋಮಣಿ ಅಕಾಲಿ ದಳ(ಸಂಯುಕ್ತ್) ಜೊತೆ ಮೈತ್ರಿ ಮಾಡಿಕೊಂಡಿದ್ದರು.
ಪ್ರಮುಖ ಸಾಂವಿಧಾನಿಕ ಹುದ್ದೆಗೆ ಆಗಸ್ಟ್ 6 ರಂದು ಚುನಾವಣೆ ನಡೆಯಲಿದೆ. ಪ್ರಸ್ತುತ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಅವಧಿ ಆಗಸ್ಟ್ 10 ರಂದು ಕೊನೆಗೊಳ್ಳುತ್ತದೆ.
ಅಮರೀಂದರ್ ಸಿಂಗ್, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಸೇರಿ ಹಲವಾರು ಹೆಸರುಗಳು ಉಪರಾಷ್ಟ್ರಪತಿ ಹುದ್ದೆಗೆ ಪರಿಗಣನೆಯಲ್ಲಿವೆ. ಬಿಜೆಪಿಯ ಉನ್ನತ ನಾಯಕತ್ವ ಮತ್ತು ಸಂಸದೀಯ ಮಂಡಳಿಯು ಉಪರಾಷ್ಟ್ರಪತಿ ಅಭ್ಯರ್ಥಿಯನ್ನು ಅಂತಿಮಗೊಳಿಸಲಿದೆ ಎನ್ನಲಾಗಿದೆ.
ಸಿಂಗ್ ಪ್ರಸ್ತುತ ಲಂಡನ್ ನಲ್ಲಿದ್ದು, ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಲಂಡನ್ ನಿಂದ ಹಿಂದಿರುಗಿದ ನಂತರ ಪಂಜಾಬ್ ಲೋಕ ಕಾಂಗ್ರೆಸ್ ಅನ್ನು ಭಾರತೀಯ ಜನತಾ ಪಕ್ಷ(ಬಿಜೆಪಿ)ದೊಂದಿಗೆ ವಿಲೀನಗೊಳಿಸುವ ಸಾಧ್ಯತೆಯಿದೆ ಎಂದು ಪಂಜಾಬ್ ಬಿಜೆಪಿಯ ಹಿರಿಯ ನಾಯಕ ಹರ್ಜಿತ್ ಸಿಂಗ್ ಗ್ರೆವಾಲ್ ತಿಳಿಸಿದ್ದಾರೆ.
ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಅಮರೀಂದರ್ ಲಂಡನ್ ಗೆ ತೆರಳುವ ಮೊದಲು ಬಿಜೆಪಿಯೊಂದಿಗೆ ತಮ್ಮ ಪಕ್ಷವನ್ನು ವಿಲೀನಗೊಳಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಗ್ರೆವಾಲ್ ಹೇಳಿದ್ದಾರೆ.