ಶಿವಸೇನೆಯ 40ಕ್ಕೂ ಅಧಿಕ ಶಾಸಕರು ಸಚಿವ ಏಕನಾಥ್ ಶಿಂಧೆ ನೇತೃತ್ವದಲ್ಲಿ ಬಂಡಾಯವೆದ್ದಿದ್ದ ಪರಿಣಾಮ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಪತನಗೊಂಡಿದೆ. ಬಿಜೆಪಿ ಬೆಂಬಲದೊಂದಿಗೆ ಈಗ ಏಕನಾಥ್ ಶಿಂಧೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ದೇವೇಂದ್ರ ಫಡ್ನವೀಸ್ ಉಪ ಮುಖ್ಯಮಂತ್ರಿಯಾಗಿದ್ದಾರೆ.
ಏಕನಾಥ್ ಶಿಂಧೆ ಸರ್ಕಾರ ನಾಳೆ ಸದನದಲ್ಲಿ ಬಹುಮತ ಸಾಬೀತು ಪಡಿಸಬೇಕಿದ್ದು, ಗೋವಾದಲ್ಲಿ ಬೀಡು ಬಿಟ್ಟಿರುವ ಬಂಡಾಯ ಶಾಸಕರು ಇಂದು ಸಂಜೆಯೊಳಗೆ ಮುಂಬೈಗೆ ಆಗಮಿಸುವ ಸಾಧ್ಯತೆ ಇದೆ. ಇದರ ಮಧ್ಯೆ ಶಿವಸೇನೆಯ 19 ಮಂದಿ ಸಂಸದರು ಮುಂದಿನ ದಿನಗಳಲ್ಲಿ ಯಾವ ತೀರ್ಮಾನ ಕೈಗೊಳ್ಳಲಿದ್ದಾರೆ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
19 ಸಂಸದರ ಪೈಕಿ 12 ಮಂದಿ ಸಂಸದರು ಏಕನಾಥ್ ಶಿಂಧೆ ಅವರ ಜೊತೆ ಹೋಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ತಮ್ಮ ತಮ್ಮ ಕ್ಷೇತ್ರಗಳಲ್ಲಿನ ಬಹುತೇಕ ಶಾಸಕರು ಬಂಡಾಯ ಸಾರಿರುವುದರಿಂದ ಮುಂದಿನ ದಿನಗಳಲ್ಲಿ ಅವರ ಬೆಂಬಲ ಬೇಕಾಗುತ್ತದೆ ಎಂಬ ಕಾರಣಕ್ಕೆ ಈ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.