ದೆಹಲಿಯಿಂದ ಜಬಲ್ಪುರಕ್ಕೆ ತೆರಳುತ್ತಿದ್ದ ಸ್ಪೈಸ್ ಜೆಟ್ ವಿಮಾನದಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಇದು ಸಿಬ್ಬಂದಿಯೊಬ್ಬರ ಗಮನಕ್ಕೆ ಬರುತ್ತಿದ್ದಂತೆ ವಿಮಾನವನ್ನು ವಾಪಸ್ ದೆಹಲಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲಾಗಿದೆ. ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.
ಇಂದು ಬೆಳಗ್ಗೆ ಈ ಘಟನೆ ನಡೆದಿದ್ದು, ವಿಮಾನ 5000 ಅಡಿ ಎತ್ತರದಲ್ಲಿ ಹಾರುತ್ತಿದ್ದ ವೇಳೆ ಕ್ಯಾಬಿನ್ ನಲ್ಲಿ ಹೊಗೆ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಸಿಬ್ಬಂದಿ ಕೂಡಲೇ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ತಿಳಿಸಿದ್ದು, ತಕ್ಷಣವೇ ವಾಪಸ್ ದೆಹಲಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಿಸಲಾಗಿದೆ. ವಿಮಾನದಲ್ಲಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ. ಇದರಿಂದ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.
ಕಳೆದ ತಿಂಗಳು ಇದೇ ರೀತಿಯ ಘಟನೆ ಸ್ಪೈಸ್ ಜೆಟ್ ವಿಮಾನದಲ್ಲಿ ನಡೆದಿದ್ದು, ಜೂನ್ 19 ರಂದು ಪಾಟ್ನಾದಿಂದ ನವದೆಹಲಿಗೆ ತೆರಳುತ್ತಿದ್ದ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇದು ಗಮನಕ್ಕೆ ಬರುತ್ತಲೇ ವಿಮಾನ ಲ್ಯಾಂಡ್ ಮಾಡಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಲಾಗಿತ್ತು. ಹಾರಾಟದ ವೇಳೆ ಹಕ್ಕಿ ಬಡಿದಿದ್ದ ಕಾರಣ ಬೆಂಕಿ ಕಾಣಿಸಿಕೊಂಡಿತ್ತು ಎಂಬುದು ಬಳಿಕ ತಿಳಿದು ಬಂದಿತ್ತು.