ಬೆಂಗಳೂರು: ರಾಜ್ಯದ ಬಡ ಜನರಿಗೆ ಅನುಕೂಲವಾಗುವಂತೆ ರಾಜ್ಯಾದ್ಯಂತ 438 ನಮ್ಮ ಕ್ಲಿನಿಕ್ ಸ್ಥಾಪನೆಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಬಜೆಟ್ ನಲ್ಲಿ ಘೋಷಿಸಿದ್ದ ಯೋಜನೆಗೆ ಹಸಿರು ನಿಶಾನೆ ತೋರಲಾಗಿದೆ. ದೆಹಲಿಯ ಸರ್ಕಾರದ ಮೊಹಲ್ಲಾ ಕ್ಲಿನಿಕ್ ಮಾದರಿಯಲ್ಲಿ ರಾಜ್ಯದಲ್ಲಿ ನಮ್ಮ ಕ್ಲಿನಿಕ್ ಸ್ಥಾಪಿಸಲಾಗುವುದು.
ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಹೊರತಾಗಿ ನಗರ ಮತ್ತು ಪಟ್ಟಣಗಳ ವಾರ್ಡ್ ಮಟ್ಟದಲ್ಲಿ ಆರೋಗ್ಯ ಸೇವೆ ನೀಡಲಾಗುತ್ತದೆ. ಬೆಂಗಳೂರು ಮಹಾನಗರದ ಎಲ್ಲಾ ವಾರ್ಡ್ ಗಳು ಸೇರಿದಂತೆ ರಾಜ್ಯದ ವಿವಿಧಡೆ ಮೊಹಲ್ಲಾ ಕ್ಲಿನಿಕ್ ಗಳನ್ನು ಸ್ಥಾಪಿಸಲಾಗುವುದು. ಇದಕ್ಕಾಗಿ 155.77 ಕೋಟಿ ವೆಚ್ಚ ಮಾಡಲಾಗುವುದು. 438 ನಮ್ಮ ಕ್ಲೀನಿಕ್ ಗಳನ್ನು ಸ್ಥಾಪಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.
ಪ್ರತಿ ಕ್ಲಿನಿಕ್ ಗಳಲ್ಲಿ ಒಬ್ಬ ವೈದ್ಯಾಧಿಕಾರಿ, ಶುಶ್ರೂಷಕ, ದ್ವಿತೀಯ ದರ್ಜೆ ಸಹಾಯಕರು ಇರಲಿದ್ದಾರೆ. ಜನರಿಗೆ ಸ್ಥಳೀಯವಾಗಿ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಕ್ಲಿನಿಕ್ ಗಳನ್ನು ಆರಂಭಿಸಲಾಗುವುದು. ಈ ಕ್ಲಿನಿಕ್ ಗಳಲ್ಲಿ ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್ ಸೇರಿದಂತೆ 14 ರೀತಿಯ ಪರೀಕ್ಷೆಗಳು ನಡೆಯಲಿವೆ. ಸ್ಥಳದಲ್ಲಿಯೇ ತಪಾಸಣೆ ವರದಿ ಸಿಗಲಿದೆ. ಆರೋಗ್ಯ ತಪಾಸಣೆ, ತಾಯಿ, ಮಗು ಆರೋಗ್ಯ ಸಹಿತ 12 ಆರೋಗ್ಯ ಸೇವೆಗಳನ್ನು ನೀಡಲಾಗುವುದು. ಗ್ರಾಮೀಣ ಪ್ರದೇಶದ ಆರೋಗ್ಯ ಉಪ ಕೇಂದ್ರಗಳು ಆರೋಗ್ಯ ಮತ್ತು ಯೋಗಕ್ಷೇಮ ಕೇಂದ್ರಗಳಾಗಿ ಪರಿವರ್ತನೆ ಆಗಲಿವೆ ಎನ್ನಲಾಗಿದೆ.