ಭೂಮಿಯ ಮೇಲಿನ ವಿಲಕ್ಷಣ ವಸ್ತುಗಳ ಬಗ್ಗೆ ಯಾರಾದರೂ ಪಟ್ಟಿ ಮಾಡಲು ಮುಂದಾದರೆ ಈ ಸಾಲಿನಲ್ಲಿ ಖಂಡಿತವಾಗಿ ಸಿಂಗಾಪುರದಲ್ಲಿ ತಯಾರಾಗುತ್ತಿರುವ ಚರಂಡಿ ನೀರಿನಿಂದ ನಿರ್ಮಾಣವಾದ ಬಿಯರ್ ಕೂಡ ಸ್ಥಾನ ಪಡೆಯುವುದರಲ್ಲಿ ಯಾವುದೇ ಸಂದೇಹವಿಲ್ಲ. ಹೌದು..! ಸಿಂಗಾಪುರದಲ್ಲಿ ಚರಂಡಿ ನೀರನ್ನು ಶುದ್ಧೀಕರಿಸಿ ಬಿಯರ್ಗಳನ್ನು ತಯಾರಿಸಿ ಮಾರಾಟ ಕೂಡ ಮಾಡಲಾಗ್ತಿದೆ . ಏಪ್ರಿಲ್ ತಿಂಗಳಿನಿಂದ ಸೂಪರ್ ಮಾರ್ಕೆಟ್ಗಳಲ್ಲಿ ಈ ಬಿಯರ್ ಲಭ್ಯವಿದೆ.
NEWBrew ಸಿಂಗಾಪುರದ ಕೊಳಚೆ ನೀರಿನಿಂದ ಮರುಬಳಕೆಯ ಕುಡಿಯುವ ನೀರಿನ ಬ್ರ್ಯಾಂಡ್ NEWater ಅನ್ನು ಬಳಸುತ್ತದೆ, ಇದು ನೀರಿನ ಭದ್ರತೆಯನ್ನು ಸುಧಾರಿಸಲು 2003 ರಲ್ಲಿ ಸಂಸ್ಕರಣಾ ಘಟಕಗಳಿಂದ ಮೊದಲು ಆರಂಭಿಸಲಾಯ್ತು. ಹೊಸ ಬಿಯರ್ ಸುಸ್ಥಿರ ನೀರಿನ ಬಳಕೆ ಮತ್ತು ಮರುಬಳಕೆಯ ಪ್ರಾಮುಖ್ಯತೆಯ ಕುರಿತು ಸಿಂಗಾಪುರದವರಿಗೆ ಶಿಕ್ಷಣ ನೀಡುವ ಪ್ರಯತ್ನದ ಭಾಗವಾಗಿದೆ ಎಂದು PUB ಹೇಳುತ್ತದೆ.
ನೇರಳಾತೀತ ಬೆಳಕಿನಿಂದ ಒಳಚರಂಡಿಯನ್ನು ಸೋಂಕುರಹಿತಗೊಳಿಸುವುದರ ಮೂಲಕ ಮತ್ತು ಮಾಲಿನ್ಯಕಾರಕ ಕಣಗಳನ್ನು ತೆಗೆದುಹಾಕುವ ಮೂಲಕ NEWater ಅನ್ನು ತಯಾರಿಸಲಾಗುತ್ತದೆ.
NEWBrew ಜನರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಸಂಪಾದಿಸಿದೆ. ಕೆಲವರು ಇದರ ರುಚಿಯನ್ನು ಇಷ್ಟಪಟ್ಟಿದ್ದಾರೆ ಮತ್ತು ಅದನ್ನು ಮರುಬಳಕೆಯ ಒಳಚರಂಡಿ ನೀರಿನಿಂದ ಮಾಡಲಾಗಿದೆ ಎಂದು ರುಚಿಯಿಂದಂತೂ ಕಂಡು ಹಿಡಿಯಲು ಸಾಧ್ಯವಾಗಲ್ಲ ಎಂದು ಹೇಳ್ತಿದ್ದಾರೆ. ಆದರೆ ಇನ್ನೂ ಕೆಲವರು ಚರಂಡಿ ನೀರಿನಿಂದ ತಯಾರಾದ ಬಿಯರ್ ಕುಡಿಯಬೇಕೇ..? ಎಂದು ಮೂಗು ಮುರೀತಿದ್ದಾರೆ.
ಶೌಚಾಲಯದ ನೀರಿನಿಂದ ಬಿಯರ್ ತಯಾರಿಸುತ್ತಾರೆ ಎಂದರೆ ನಂಬಲು ಆಗುತ್ತಿಲ್ಲ. ಆದರೆ ಇದು ಫ್ರಿಡ್ಜ್ ನೀರಿನಿಂದ ತಯಾರಾಯ್ತೋ ಅಥವಾ ಚರಂಡಿ ನೀರಿನಿಂದ ತಯಾರಾಯ್ತೋ ಎನ್ನುವುದು ನನಗೆ ಗೊತ್ತಿಲ್ಲ. ಇದರ ರುಚಿಯಲ್ಲಿ ಮಾತ್ರ ಯಾವುದೇ ಬದಲಾವಣೆಯಾಗಿಲ್ಲ. ಈ ಬಿಯರ್ ನನಗೆ ಇಷ್ಟವಾಗಿದೆ ಎಂದು ಚಿವ್ ವೈ ಲೈನ್ ಎಂಬವರು ಹೇಳಿದ್ದಾರೆ.
ನೀವು ಹೇಳದೇ ಹೋಗಿದ್ದರೆ ಇದು ಚರಂಡಿ ನೀರಿನಿಂದ ತಯಾರಾಗಿದೆ ಎಂದು ಯಾರು ಊಹಿಸುತ್ತಲೂ ಇರಲಿಲ್ಲ ಎಂದು ಗ್ರೇಸ್ ಚೆನ್ ಎಂಬವರು ಹೇಳಿದ್ದಾರೆ.
ಆದರೆ ಕೆಲವರು ಚರಂಡಿ ನೀರಿನ ಬಿಯರ್ ಕುಡೀಬೇಕೇ..? ಎಂದು ಪ್ರಶ್ನೆ ಮಾಡುತ್ತಿದ್ದು ಈ ಬ್ರ್ಯಾಂಡ್ನ ಬಿಯರ್ ಬಳಕೆ ನಾವು ಮಾಡಲ್ಲ ಎಂದಿದ್ದಾರೆ.