ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಪ್ರತಿಷ್ಟಿತ ಡೈಮಂಡ್ ಲೀಗ್ ನಲ್ಲಿ 89.94 ಮೀಟರ್ ದೂರ ಎಸೆಯುವ ಮೂಲಕ ತಮ್ಮದೇ ಈ ಹಿಂದಿನ ರಾಷ್ಟ್ರೀಯ ದಾಖಲೆಯನ್ನು ಮತ್ತಷ್ಟು ಉತ್ತಮಪಡಿಸಿಕೊಂಡಿದ್ದಾರಲ್ಲದೇ ಬೆಳ್ಳಿ ಪದಕಕ್ಕೆ ಭಾಜನರಾಗಿದ್ದಾರೆ. ಕಳೆದ ತಿಂಗಳು ಟುರ್ಕುನಲ್ಲಿ ನಡೆದಿದ್ದ Paavo Nurmi ಗೇಮ್ಸ್ ನಲ್ಲಿ 89.30 ಮೀಟರ್ ಜಾವೆಲಿನ್ ಎಸೆದಿದ್ದ ಅವರು ದಾಖಲೆ ಬರೆದಿದ್ದರು.
ಸ್ಟಾಕ್ ಹೋಂ ನಲ್ಲಿ ಗುರುವಾರದಂದು ನಡೆದ ಡೈಮಂಡ್ ಲೀಗ್ ನಲ್ಲಿ 24 ವರ್ಷದ ನೀರಜ್ ಚೋಪ್ರಾ ಮೊದಲ ಎಸೆತದಲ್ಲಿಯೇ ಈ ಸಾಧನೆ ಮಾಡಿದ್ದು, ಗ್ರೇನೆಡಾದ ಅಂಡರ್ಸನ್ ಪೀಟರ್ 90.31 ಮೀಟರ್ ದೂರ ಎಸೆಯುವ ಮೂಲಕ ಚಿನ್ನದ ಪದಕ ಗಳಿಸಿದ್ದಾರೆ. ಇನ್ನು ಜರ್ಮನಿಯ ಜೂಲಿಯನ್ ವೆಬರ್ 89.09 ಮೀಟರ್ ದೂರ ಎಸೆಯುವ ಮೂಲಕ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ನೀರಜ್ ಚೋಪ್ರಾ ನಂತರದ ಎಸೆತಗಳಲ್ಲಿ 84.37 ಮೀಟರ್, 87.46 ಮೀಟರ್, 84.77 ಮೀಟರ್, 86.67 ಮತ್ತು 86.84 ಮೀಟರ್ ದೂರ ಎಸೆದಿದ್ದು, ಆಗಸ್ಟ್ 2018 ರಲ್ಲಿ ಜ್ಯುರಿಚ್ ನಲ್ಲಿ ನಡೆದ ಪಂದ್ಯಾವಳಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದ ಅವರು ಈ ಬಾರಿ ಬೆಳ್ಳಿ ಪದಕಕಕ್ಕೆ ಭಾಜನರಾಗಿದ್ದಾರೆ. ಜ್ಯುರಿಚ್ ನಲ್ಲಿ ನಡೆದಿದ್ದ ಪಂದ್ಯಾವಳಿಯಲ್ಲಿ ಅವರು 85.73 ಮೀಟರ್ ದೂರ ಎಸೆದಿದ್ದರು.
ಸ್ವೀಡನ್ ರಾಜಧಾನಿಯಲ್ಲಿ ನಡೆದ ಈ ಪ್ರತಿಷ್ಟಿತ ಪಂದ್ಯದಲ್ಲಿ ಬೆಳ್ಳಿ ಪದಕ ಗಳಿಸುವ ಮೂಲಕ ಮುಂದಿನ ತಿಂಗಳು ಅಮೆರಿಕಾದ Eugene ನಲ್ಲಿ ನಡೆಯುವ ಪಂದ್ಯಕ್ಕೆ ತಾಲೀಮು ನಡೆಸಿದಂತಾಗಿದೆ. ಜುಲೈ 15 ರಿಂದ 24 ರ ವರೆಗೆ Eugene ದಲ್ಲಿ ವಿಶ್ವ ಜಾವೆಲಿನ್ ಪಂದ್ಯಾವಳಿ ನಡೆಯಲಿದೆ.ನೀರಜ್ ಚೋಪ್ರಾ ಒಲಂಪಿಕ್ಸ್ ನ ಆಥ್ಲೆಟಿಕ್ಸ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯರಾಗಿದ್ದಾರೆ.