ತಮ್ಮ ಸರ್ಕಾರ ಬಹುಮತ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಂಗಳವಾರ ರಾತ್ರಿ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರನ್ನು ಭೇಟಿಯಾದ ಉದ್ಧವ್ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದು ಅದನ್ನು ಅಂಗೀಕರಿಸಲಾಗಿದೆ.
ಆದರೆ ತಮ್ಮ ರಾಜೀನಾಮೆಗೂ ಮುನ್ನ ಉದ್ಧವ್ ಠಾಕ್ರೆ ಅನುಸರಿಸಿರುವ ಚಾಣಾಕ್ಷ ರಾಜಕೀಯ ನಡೆಯೊಂದು ಈಗ ಚರ್ಚೆಗೆ ಗ್ರಾಸವಾಗಿದೆ. ಔರಂಗಾಬಾದ್ ಹಾಗೂ ಉಸ್ಮನಾಬಾದ್ ನಗರದ ಹೆಸರು ಬದಲಾವಣೆಗೆ ಉದ್ಧವ್ ಠಾಕ್ರೆ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಈ ಮೂಲಕ ಬಿಜೆಪಿಗೆ ಪರೋಕ್ಷ ಟಾಂಗ್ ನೀಡಲಾಗಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಈ ನಗರಗಳ ಹೆಸರು ಬದಲಾವಣೆಗೆ ಬಿಜೆಪಿ ಈ ಹಿಂದಿನಿಂದಲೂ ಒತ್ತಾಯಿಸಿಕೊಂಡು ಬಂದಿತ್ತು. ಅಲ್ಲದೆ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾದ ಬಳಿಕ ಹಿಂದುತ್ವದಿಂದ ಹಿಂದೆ ಸರಿದಿದ್ದಾರೆ ಎಂಬ ಆರೋಪವನ್ನು ಪದೇ ಪದೇ ಮಾಡುತ್ತಿತ್ತು.
ಹೀಗಾಗಿ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಉದ್ಧವ್ ಠಾಕ್ರೆ, ಔರಂಗಾಬಾದ್ ನಗರವನ್ನು ಸಂಭಾಜಿ ನಗರ, ಉಸ್ಮಾನಾಬಾದ್ ನಗರವನ್ನು ಧಾರ ಶಿವ್ ಎಂದು ಮರು ನಾಮಕರಣ ಮಾಡಿದ್ದಾರೆ. ಈ ಮೂಲಕ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಮಾಡಲು ಮುಂದಾಗಿದ್ದ ಕಾರ್ಯವನ್ನು ತಮ್ಮ ಅಧಿಕಾರಾವಧಿಯಲ್ಲಿಯೇ ಮಾಡಿ ಬಳಿಕ ರಾಜೀನಾಮೆ ನೀಡಿದ್ದಾರೆ.