ಜಪಾನ್‌ನ ಈ ವೃದ್ಧ ನಾಗ ಸಾಧು ಎಂದೇ ಪ್ರಸಿದ್ಧಿ ಪಡೆದಿರೋ ವ್ಯಕ್ತಿ. ಹೆಸರು ಮಸಾಫುಮಿ ನಾಗಸಾಕಿ, ವಯಸ್ಸು 87. ಈತ ಉಷ್ಣವಲಯದ ದ್ವೀಪದಲ್ಲಿ ಸುಮಾರು ಮೂರು ದಶಕಗಳನ್ನು ಏಕಾಂಗಿಯಾಗಿ ಕಳೆದಿದ್ದಾರೆ. ಮೂಲತಃ ನಾಗಸಾಕಿ ಫೋಟೋಗ್ರಾಫರ್. 50ನೇ ವಯಸ್ಸಿನಲ್ಲಿ ಅವರಿಗೆ ಛಾಯಾಗ್ರಹಣದ ಕೆಲಸ ಸಾಕೆನಿಸಿತ್ತು. ಹೊಸತನ್ನು ಮಾಡಬೇಕೆಂಬ ಛಲ ಹುಟ್ಟಿತ್ತು.
1989ರಲ್ಲಿ ನಾಗಸಾಕಿ ತಮ್ಮ ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ತೊರೆದರು. ತಾಜಾ ನೀರು ಕೂಡ ದೊರೆಯದಂತಹ ಜಪಾನ್‌ನ ಮುಖ್ಯ ಭೂಭಾಗದ ದಕ್ಷಿಣದಿಂದ ನೂರಾರು ಕಿಲೋಮೀಟರ್ ದೂರದಲ್ಲಿರುವ ಸೊಟೊಬನಾರಿ ಎಂಬ ದ್ವೀಪಕ್ಕೆ ಏಕಾಂಗಿಯಾಗಿ ತೆರಳಿದ್ರು. ಕೇವಲ ಒಂದು ಕಿಲೋಮೀಟರ್ ಅಗಲದ ದ್ವೀಪ ಇದು. ದಟ್ಟವಾದ ಗಿಡ ಮರಗಳಿಂದ ತುಂಬಿದ ಹಚ್ಚ ಹಸಿರು ದ್ವೀಪ ಇದು. ಆದರೆ ಇಲ್ಲಿ ಯಾರೂ ವಾಸಿಸುತ್ತಿರಲಿಲ್ಲ. ಇಡೀ ದ್ವೀಪದಲ್ಲಿದ್ದ ಏಕೈಕ ವ್ಯಕ್ತಿ ಅಂದ್ರೆ ನಾಗಸಾಕಿ ಮಾತ್ರ.
ದ್ವೀಪದಲ್ಲಿ ಕೆಲವು ದಿನಗಳನ್ನು ಕಳೆದ ನಂತರವೂ ನಾಗಸಾಕಿ ಮನೆಗೆ ಹಿಂತಿರುಗಲಿಲ್ಲ. ಅವರು ಆ ದ್ವೀಪವನ್ನೇ ತಮ್ಮ ಹೊಸ ಮನೆಯನ್ನಾಗಿ ಪರಿವರ್ತಿಸಿದರು. 29 ವರ್ಷಗಳ ಕಾಲ ಒಬ್ಬಂಟಿಯಾಗಿ ಅಲ್ಲಿ ವಾಸಿಸಿದ್ದಾರೆ. 2018ರಲ್ಲಿ ನಾಗಸಾಕಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ್ರು. ಇವರನ್ನ ಗಮನಿಸಿದ ಸ್ಥಳೀಯ ಮೀನುಗಾರನೊಬ್ಬ ಸಮುದ್ರತೀರದಲ್ಲಿ ಬಿದ್ದಿದ್ದ ನಾಗಸಾಕಿಯನ್ನು ಕರೆದೊಯ್ದಿದ್ದಾನೆ. ನಂತರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯ್ತು. 87ರ ಹರೆಯದ ಈ ವೃದ್ಧನೀಗ ಸೊಟೊಬನಾರಿ ದ್ವೀಪದಲ್ಲಿ ವಾಸಿಸುತ್ತಿಲ್ಲ.
ಆದರೆ ಇತ್ತೀಚೆಗಷ್ಟೆ ಆ ದ್ವೀಪವನ್ನು ಕೊನೆಯ ಬಾರಿಗೆ ನೋಡುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಅವರ ಆಸೆಯಂತೆ ದ್ವೀಪಕ್ಕೆ ಕರೆದೊಯ್ಯಲಾಯ್ತು. ಆದ್ರೆ ವಯಸ್ಸಾಗಿರುವುದರಿಂದ ಅಲ್ಲಿ ಒಬ್ಬಂಟಿಯಾಗಿ ಅವರು ವಾಸಿಸಲು ಸಾಧ್ಯವಿಲ್ಲ. ನಾಗಸಾಕಿ ಕೊನೆಯ ಬಾರಿ ದ್ವೀಪದ ದಡ ಮುಟ್ಟಿದಾಗಿನ ಭಾವನಾತ್ಮಕ ಕ್ಷಣಗಳು ಇಂಟರ್ನೆಟ್‌ನಲ್ಲೂ ವೈರಲ್ ಆಗಿವೆ.