ಕಲಬುರಗಿ: ತಂದೆಯಿಂದಲೇ ಇಬ್ಬರು ಮಕ್ಕಳ ಹತ್ಯೆ ನಡೆದಿದೆ. ನಾಲ್ವರು ಮಕ್ಕಳ ಪೈಕಿ ಇಬ್ಬರ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ.
11 ವರ್ಷದ ಸೋನಿ ಮತ್ತು 9 ವರ್ಷದ ಮಯೂರಿ ಅವರನ್ನು ಆಟೋ ಚಾಲಕ ಲಕ್ಷ್ಮಿಕಾಂತ್ ಕೊಲೆ ಮಾಡಿದ್ದಾನೆ. ಕಲಬುರ್ಗಿ ನಗರದ ವೀರೇಂದ್ರ ಪಾಟೀಲ್ ಬಡಾವಣೆಯಲ್ಲಿ ಘಟನೆ ನಡೆದಿದೆ.
ಆಟೋ ಚಾಲಕನಾಗಿದ್ದ ಲಕ್ಷ್ಮಿಕಾಂತ್ ನಿನ್ನೆ ಸಂಜೆ ಕತ್ತು ಹಿಸುಕಿ ಮಕ್ಕಳನ್ನು ಕೊಲೆ ಮಾಡಿ, ಇವತ್ತು ಮಧ್ಯಾಹ್ನದವರೆಗೂ ಆಟೋದಲ್ಲಿ ಶವ ಇಟ್ಟುಕೊಂಡು ಓಡಾಡಿದ್ದಾನೆ. ಸಂಜೆ ವೇಳೆಗೆ ಕಿರಾತಕ ಸಿಕ್ಕಿಬಿದ್ದಿದ್ದಾನೆ ಎನ್ನಲಾಗಿದೆ.
ಬೋವಿಗಲ್ಲಿ ನಿವಾಸಿ ಆಟೋ ಚಾಲಕ ಲಕ್ಷ್ಮಿಕಾಂತ್ ಇಂತಹ ಕೃತ್ಯ ವ್ಯಸಗಿದ ವ್ಯಕ್ತಿ ಎಂದು ಹೇಳಲಾಗಿದೆ. ಲಕ್ಷ್ಮಿಕಾಂತನ ಪತ್ನಿ ನಾಲ್ಕು ತಿಂಗಳ ಹಿಂದೆ ಬೇರೆಯವನೊಂದಿಗೆ ಓಡಿ ಹೋಗಿದ್ದಳು. ನಾಲ್ವರು ಮಕ್ಕಳು ಕಳೆದ ನಾಲ್ಕು ತಿಂಗಳಿಂದ ಅಜ್ಜಿ ಮನೆಯಲ್ಲಿ ನೆಲೆಸಿದ್ದರು. ನಾಲ್ಕು ದಿನಗಳ ಹಿಂದೆಯಷ್ಟೇ ಲಕ್ಷ್ಮಿಕಾಂತ ಮಕ್ಕಳನ್ನು ಕರೆದುಕೊಂಡು ಬಂದಿದ್ದ. 4 ದಿನಗಳಿಂದ ಮಕ್ಕಳನ್ನು ಆಟೋದಲ್ಲಿ ಕೂರಿಸಿಕೊಂಡು ಓಡಾಡುತ್ತಿದ್ದ. ನಿನ್ನೆ ಸಂಜೆ ಇಬ್ಬರು ಪುತ್ರಿಯರನ್ನು ಕೊಲೆ ಮಾಡಿದ್ದಾನೆ. ಇಂದು ಮಧ್ಯಾಹ್ನದವರೆಗೆ ಮಕ್ಕಳ ಶವ ಆಟೋದಲ್ಲಿ ಇಟ್ಟುಕೊಂಡು ಓಡಾಡಿದ್ದಾನೆ ಮಧ್ಯಾಹ್ನ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಮಕ್ಕಳಾದ ನವಿತ್ ಮತ್ತು ಶ್ರೇಯಾ ಅವರೊಂದಿಗೆ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಕಲಬುರ್ಗಿಯ ಮಹಾತ್ಮ ಬಸವೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.