ಉದಯಪುರ: ನೂಪುರ್ ಶರ್ಮಾ ಬೆಂಬಲಿಸಿದ್ದಕ್ಕೆ ಉದಯಪುರದಲ್ಲಿ ವ್ಯಕ್ತಿಯ ಶಿರಚ್ಛೇದ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧಿತರಾಗಿರುವ ಇಬ್ಬರು ಆರೋಪಿಗಳ ವಿರುದ್ಧ ಯುಎಪಿಎ ಅಡಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗೆ ಪಾಕಿಸ್ತಾನದ ಲಿಂಕ್ ಇರುವ ನಿಟ್ಟಿನಲ್ಲಿಯೇ ತನಿಖೆ ನಡೆಸಲಾಗುತ್ತಿದೆ ಎಂದು ರಾಜಸ್ಥಾನ ಡಿಜಿಪಿ ಮೋಹನ್ ಲಾಲ್ ತಿಳಿಸಿದ್ದಾರೆ.
ಉದಯಪುರದಲ್ಲಿ ನಡೆದ ಹತ್ಯೆ ಪ್ರಕರಣದ ಜವಾಬ್ದಾರಿಯನ್ನು ಎನ್ ಐ ಎ ಗೆ ವಹಿಸಲಾಗಿದೆ. ಬಂಧಿತ ಮುಹಮ್ಮದ್ ಗೌಸ್ ಹಾಗೂ ಮುಹಮ್ಮದ್ ರಿಯಾಜ್ ಅಟ್ಟಾರಿ ವಿರುದ್ಧ ಯುಎಪಿಎ ಅಡಿ ಪ್ರಕರಣ ದಾಖಲಿಸಲಾಗಿದೆ. ಇದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಪ್ರಕರಣವಾಗಿದೆ. ಆರೋಪಿಗಳಿಗೆ ಪಾಕಿಸ್ತಾನದ ಜತೆ ಸಂಪರ್ಕವಿದೆ ಎಂಬ ಬಗ್ಗೆ ಮಾಹಿತಿ ಇದೆ. ಇದು ಭಯೋತ್ಪದಕ ಕೃತ್ಯ ಎಂದೇ ಪರಿಗಣಿಸಲಾಗಿದೆ ಎಂದು ತಿಳಿಸಿದರು.
ಪ್ರಕರಣ ಸಂಬಂಧ ಮತ್ತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ದೆಹಲಿ, ಮುಂಬೈ, ಕಾನ್ಪುರದಲ್ಲಿ ದಾವತ್-ಎ-ಇಸ್ಲಾಮಿ ಸಂಘಟನೆ ಸಕ್ರಿಯವಾಗಿದೆ ಎಂದು ಡಿಜಿಪಿ ಹೇಳಿದ್ದಾರೆ.